ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಎಐಎಂಎಸ್ಎಸ್ ಮನವಿ

KannadaprabhaNewsNetwork | Published : Dec 10, 2024 12:30 AM

ಸಾರಾಂಶ

ಎಲ್ಲಾ ಮಹಿಳೆಯರಿಗೆ ಶಿಕ್ಷಣ ಮತ್ತು ಆರೋಗ್ಯವನ್ನು ಖಾತ್ರಿಪಡಿಸಿ. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜುಗಳನ್ನು ತೆರೆಯಿರಿ.

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಜಿಲ್ಲಾ ಸಮಿತಿಯವರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಎಲ್ಲಾ ಮಹಿಳೆಯರಿಗೆ ಶಿಕ್ಷಣ ಮತ್ತು ಆರೋಗ್ಯವನ್ನು ಖಾತ್ರಿಪಡಿಸಿ. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜುಗಳನ್ನು ತೆರೆಯಿರಿ. ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿ ಮತ್ತು ನವಜಾತ ಶಿಶುವಿನ ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಗಟ್ಟಿ. ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಿ. ಅತ್ಯಾಚಾರಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಿ ಎಂದು ಒತ್ತಾಯಿಸಿದರು.

ಅಶ್ಲೀಲ ಸಿನಿಮಾ, ಸಾಹಿತ್ಯ, ಜಾಹೀರಾತು, ವೆಲ್ಸ್ಟ್ ಹಾಗೂ ಮದ್ಯ- ಮಾದಕ ವಸ್ತುಗಳನ್ನು ನಿಷೇಧಿಸಿ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ನಿಲ್ಲಲಿ. ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಿ. ಶುಚಿ ಯೋಜನೆಯನ್ನು ಜಾರಿಗೊಳಿಸಿ. ಮಹಿಳೆಯರ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ವಿದ್ಯಾರ್ಥಿನಿಯರಲ್ಲಿನ ಅಪೌಷ್ಟಿಕತೆಯನ್ನು ತಡೆಗಟ್ಟಲು ಕಾಲೇಜು ಹಂತದವರೆಗೂ ಬಿಸಿಯೂಟವನ್ನು ವಿಸ್ತರಿಸಿ. ಯುವತಿಯರಿಗಾಗಿ ಜೂಡೋ- ಕರಾಟೆಯಂತಹ ಆತ್ಮರಕ್ಷಣ ಕೋರ್ಸ್ ಗಳನ್ನು ಕಡ್ಡಾಯಗೊಳಿಸಿ. ಹೆಣ್ಣು ಮಕ್ಕಳ ಕಾಲೇಜಿನಲ್ಲಿ ಪ್ರಾಥಮಿಕ ಆರೋಗ್ಯ ಘಟಕವನ್ನು ಸ್ಥಾಪಿಸಿ. ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಿ. ಫಾಸ್ಟ್ ಟ್ರ್ಯಾಕ್ಟ್ ನ್ಯಾಯಾಲಯಗಳ ಸಂಖ್ಯೆಗಳನ್ನು ಹೆಚ್ಚಿಸಿ, ಅವುಗಳ ಸರಿಯಾದ ಕಾರ್ಯನಿರ್ವಹಣೆ ಖಾತ್ರಿಪಡಿಸಿ ಎಂದು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಿ. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಇರುವ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಿರಿ. ಬಳ್ಳಾರಿ ಭಾಗದಲ್ಲಿ ಹೆಚ್ಚಾಗುತ್ತಿರುವ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಜಿ.ಎಸ್. ಸೀಮಾ, ಮುಖಂಡರಾದ ಪುಷ್ಪಾ, ಆಸಿಯಾ ಮೊದಲಾದವರು ಇದ್ದರು.

Share this article