ಜನನ, ಮರಣ ದಾಖಲೆಗಳ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Aug 08, 2025, 01:09 AM ISTUpdated : Aug 08, 2025, 01:10 AM IST
07ಜನನ | Kannada Prabha

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾಮಟ್ಟದ ಜನನ -ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆ ನಡೆಯಿತು.

ಉಡುಪಿ ಜಿಲ್ಲಾಮಟ್ಟದ ಜನನ -ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಕನ್ನಡಪ್ರಭ ವಾರ್ತೆ ಮಣಿಪಾಲ

ಸಾರ್ವಜನಿಕರಿಗೆ ಜನನ, ಮರಣ ದಾಖಲೆಗಳು ತಮ್ಮ ಶೈಕ್ಷಣಿಕ ಹಾಗೂ ಆರ್ಥಿಕ ವ್ಯವಹಾರಗಳು ಸೇರಿದಂತೆ ಮತ್ತಿತರ ಕೆಲಸ ಕಾರ್ಯಗಳಿಗೆ ಅತ್ಯವಶ್ಯಕವಾಗಿರುವುದರಿಂದ, ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಗುರುವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಜನನ -ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರ ನಾಗರಿಕ ನೋಂದಣಿ ಪದ್ಧತಿಯಲ್ಲಿ ಪ್ರತಿಯೊಬ್ಬ ನಾಗರಿಕರ ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಲು ಕಾನೂನು ಜಾರಿಗೆ ತಂದಿದ್ದು, ಅದರನ್ವಯ ಶೇ.100ರಷ್ಟು ನೋಂದಣಿ ಕಾರ್ಯಗಳು ಆಗುವಂತೆ ಜನನ, ಮರಣ ನೋಂದಣಿ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಎಂದರು.ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು 21 ದಿವಸಗಳಲ್ಲಿ ಯಾವುದೇ ಶುಲ್ಕವಿಲ್ಲದೇ 21ರಿಂದ ನಂತರ 30 ದಿನಗಳೊಳಗಾಗಿ ಶುಲ್ಕ 20 ರು. ಗಳನ್ನು ನೀಡಿ, ನಂತರ ಒಂದು ವರ್ಷದ ಅವಧಿಯೊಳಗೆ 50 ರು. ಶುಲ್ಕ ಭರಿಸಿ ನೋಂದಣಿ ಮಾಡಿಕೊಳ್ಳಬೇಕು. ಒಂದು ವರ್ಷದ ನಂತರದ ವಿಳಂಬ ನೋಂದಣಿಗೆ ನ್ಯಾಯಾಲಯದ ಆದೇಶ ಪಡೆಯಬೇಕು ಎಂದು ಹೇಳಿದರು.ಒಂದೊಮ್ಮೆ ಜನನ, ಮರಣಗಳ ತಪ್ಪು ಮಾಹಿತಿ ನೀಡಿದಲ್ಲಿ, ಮಾಹಿತಿದಾರರಿಗೆ ದಂಡ ವಿಧಿಸಲಾಗುವುದು. ವಿದೇಶದಲ್ಲಿ ಜನಿಸಿದ ಮಗುವಿನ ಮಾತಾ-ಪಿತರರು ಭಾರತದಲ್ಲಿ ನೆಲೆಸುವ ಉದ್ದೇಶದಿಂದ ಭಾರತಕ್ಕೆ ಹಿಂದಿರುಗಿದರೇ 60 ದಿನದೊಳಗಾಗಿ ಜನನವನ್ನು ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.ಜನನ, ಮರಣ ನೋಂದಣಿ ದಾಖಲಾತಿಗಳಲ್ಲಿ ಬದಲಾವಣೆ, ತಿದ್ದುಪಡಿಗೆ ಅವಕಾಶವಿರುವುದಿಲ್ಲ. ಔಪಚಾರಿಕ ತಪ್ಪುಗಳು ಅಂದರೆ ಅಜಾಗರೂಕತೆ, ಮುದ್ರಣ ದೋಷ, ದುರುದ್ದೇಶವಿಲ್ಲದೆ ಅನುಚಿತ ನಮೂದುಗಳನ್ನು ಮಾತ್ರ ತಿದ್ದುಪಡಿಗೆ ಅವಕಾಶವಿದೆ ಎಂದರು.ಜನನ ಮರಣ ಘಟನೆಗಳನ್ನು ಎಲ್ಲ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇ-ಜನ್ಮ ತಂತ್ರಾಶದಲ್ಲಿ ನೋಂದಣಿ ಕಾರ್ಯವನ್ನು ಕಡ್ಡಾಯವಾಗಿ ಮಾಡಬೇಕು. ಜನನ, ಮರಣ ಘಟನೆಗಳ ನೋಂದಣಿ ಹಾಗೂ ಪ್ರಮಾಣಪತ್ರಗಳ ವಿತರಣೆಯನ್ನು ಸಕಾಲ ವ್ಯಾಪ್ತಿಯಲ್ಲಿ ಒಳಪಡಿಸಲಾಗಿದ್ದು, ಸಾರ್ವಜನಿಕರಿಗೆ ನಿಗದಿತ ಕಾಲಾವಧಿಯ ಒಳಗೆ ವಿತರಣೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1000 ಪುರುಷರಿಗೆ 1004 ಮಹಿಳೆಯರು:ಪ್ರಸಕ್ತ ಸಾಲಿನ ಜನವರಿಯಿಂದ ಗ್ರಾಮಾಂತರ ಪ್ರದೇಶದಲ್ಲಿ 763, ನಗರ ವ್ಯಾಪ್ತಿಯಲ್ಲಿ 5436 ಒಟ್ಟು 6,199 ಜನನ ನೋಂದಣಿಯಾದರೆ, ಗ್ರಾಮೀಣ ಪ್ರದೇಶದಲ್ಲಿ 4242, ನಗರ ಪ್ರದೇಶದಲ್ಲಿ 2789 ಒಟ್ಟು 7031 ಮರಣಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ 22 ನಿರ್ಜೀವ ಜನನಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಲಿಂಗಾನುಪಾತವು 1000 ಗಂಡುಮಕ್ಕಳಿಗೆ, 1004 ಹೆಣ್ಣು ಮಕ್ಕಳಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಎಎಸ್‌ಪಿ ಸುಧಾಕರ್ ನಾಯಕ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ವಿ. ದೊಡಮನಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ದೊಡ್ಡೆತ್ತಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₹6 ಲಕ್ಷ ಲಾಭ: ವಸಂತಕುಮಾರ್‌
ಕೃಷ್ಣಮೂರ್ತಿಪುರಂ ಅಭಿನವ ಮಂತ್ರಾಲಯದಲ್ಲಿ ರಾಯರ ಆರಾಧನೆ