ಕನ್ನಡಪ್ರಭ ವಾರ್ತೆ ಮೈಸೂರು
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಪ್ರತಿಭಟಿಸಿದ ರೈತರು, ರಾಗಿ, ಜೋಳ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ ಬೆಳೆ ಸರಿಯಾಗಿ ಬಾರದೆ ನಷ್ಟವಾಗಿದೆ. ಅಂತರ್ಜಲ ಕುಸಿತದಿಂದ ಕೃಷಿ ಪಂಪ್ ಸೆಟ್ ಗಳಲ್ಲಿ ನೀರು ನಿಂತು ಹೋಗಿದೆ. ಇದರಿಂದ ಬೆಳೆದಿರುವಂತಹ ಕಬ್ಬು, ಬಾಳೆ, ಅರಿಶಿಣ. ತೆಂಗು ಇಳುವರಿಯಲ್ಲಿ ನಷ್ಟವಾಗಿದೆ. ಆದ್ದರಿಂದ ತಕ್ಷಣ ಬರಪೀಡಿತ ಎಂದು ಘೋಷಿಸಬೇಕಾಗಿ ಒತ್ತಾಯಿಸಿದರು.
ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಮಾನದಂಡಗಳನ್ನು ಬದಲಾಯಿಸಿ ವೈಜ್ಞಾನಿಕ ಬೆಳೆ ನಷ್ಟ ಪರಿಹಾರವನ್ನು ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರು. ಬೆಳೆ ನಷ್ಟ ಘೋಷಿಸಬೇಕು. ಇದರಿಂದ ರೈತರ ಬದುಕು, ಜೀವನ ಉಳಿಯುವಂತಾಗುತ್ತದೆ. ರಾಜ್ಯ ಸರ್ಕಾರದ ವ್ಯಾಪ್ತಿ ಬರುವ ಸುಮಾರು 25,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 30,000 ಕೋಟಿ ರು. ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರ ಬರಗಾಲ ಜಿಲ್ಲೆಗಳಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಬೇಕು. ಖಾಸಗಿ ಫೈನಾನ್ಸ್ ಗಳ ಅಟ್ಟಹಾಸ ಮುಂದುವರೆದಿದ್ದು ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿವೆ. ಗ್ರಾಪಂ ಮಟ್ಟದಲ್ಲಿ ಮೇವು ಬ್ಯಾಂಕು ಸ್ಥಾಪಿಸಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯೂ ಸರ್ಕಾರದ ಆದೇಶದಂತೆ ಪ್ರತಿ ಟನ್ ಗೆ 50 ರು. ನಂತೆ ಮೈಸೂರು ಮತ್ತು ಚಾಮರಾಜನಗರದಲ್ಲಿ ಸುಮಾರು 8 ಕೋಟಿ ರು. ಬಾಕಿ ಪಾವತಿಸಬೇಕಿದೆ ಎಂದು ಅವರು ದೂರಿದರು.
ಉತ್ತರ- ದಕ್ಷಿಣ ಎಂಬ ತಾರತಮ್ಯ ಇರಬಾರದು ಕೇಂದ್ರ ಸರ್ಕಾರ ಎಫ್.ಆರ್.ಪಿ ದರವನ್ನು ಪ್ರತಿ ಟನ್ ಗೆ 3650 ರು. ನಿಗದಿ ಮಾಡಿದೆ. ಅದರಂತೆ ಕಟಾವು, ಸಾಗಾಣಿಕೆಯನ್ನು ಕಾರ್ಖಾನೆಯವರೇ ಭರಿಸಲಿ. ಜಿಲ್ಲಾ ಮಂತ್ರಿಗಳು ತಕ್ಷಣ ರೈತ ಮುಖಂಡರ ಸಭೆ ನಡೆಸಬೇಕು. ಕೇಂದ್ರ ಸರ್ಕಾರವು ನಿಯೋಗವನ್ನು ರಾಜ್ಯಕ್ಕೆ ಕಳುಹಿಸಿ ಬರ ಅಧ್ಯಯನ ನಡೆಸಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಅವರು ಆಗ್ರಹಿಸಿದರು.
---
ಸಚಿವರ ಭೇಟಿ- ಸಮಸ್ಯೆ ಪರಿಹಾರದ ಭರವಸೆ
ಬಣ್ಣಾರಿ ಸಕ್ಕರೆ ಕಾರ್ಖಾನೆಯು 8 ಕೋಟಿ ರು. ರೈತರ ಬಾಕಿ ಹಣವನ್ನು ಉಳಿಸಿಕೊಂಡಿದ್ದು, ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲವಾದರೆ ಮತ್ತೆ ಕಾರ್ಖಾನೆ ಪ್ರಾರಂಭಕ್ಕೆ ಅವಕಾಶ ನೀಡಬಾರದು ಎಂದು ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.