ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಗಳ ಕಚೇರಿಗಳಲ್ಲಿ ಇದ್ದಂತಹ ನ್ಯಾಯಾಲಯದ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲು ಮುಂದಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ.ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ನಡೆದ ಎಲ್ಲಾ ದಾಖಲಾತಿಗಳನ್ನು ಕಂಪ್ಯೂಟರೀಕರಣ ಮಾಡುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶದ ಪ್ರಕಾರ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಕಚೇರಿಯಲ್ಲಿ ಇದ್ದಂತಹ ಸಾವಿರಾರು ನ್ಯಾಯಾಲಯದ ಪ್ರಕರಣಗಳನ್ನು ಜಿಲ್ಲೆಯಲ್ಲಿ ೨೬ನೇ ಸ್ಥಾನದಲ್ಲಿತ್ತು. ಆದರೆ ಇಂದು ಮೊದಲ ಸ್ಥಾನವನ್ನು ಪಡೆಯಲು ಮುಂದಾಗಿದ್ದೇವೆ. ಇದರಲ್ಲಿ ಅನೇಕ ಪ್ರಕರಣಗಳು ಕೆಲ ದಾಖಲಾತಿಗಳು ಇಲ್ಲದೆ ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಇಂತಹ ಪ್ರಕರಣಗಳು ಸುಮಾರು ೬೦ ರಿಂದ ೭೦ ಪ್ರಕರಣಗಳು ಉಳಿಕೆ ಇವೆ. ಇವುಗಳನ್ನು ಕೂಡ ಕೆಲ ದಾಖಲಾತಿಗಳನ್ನು ಪಡೆದು ಬಗೆಹರಿಸಲು ಮುಂದಾಗುತ್ತೇವೆ ಎಂದು ಹೇಳಿದರು.
‘ಪ್ರತಿಯೊಬ್ಬ ಅಧಿಕಾರಿಗಳು ಕೂಡ ಕೆಲಸವನ್ನು ಚಾಚು ತಪ್ಪದೆ ಮಾಡಿದರೆ ಯಾವ ಸಾರ್ವಜನಿಕರು ಮತ್ತು ಅಧಿಕಾರಿಗಳು ಬಂದು ಪ್ರಶ್ನಿಸುವ ಪರಿಸ್ಥಿತಿಯೇ ನಿರ್ಮಾಣವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ ಕೂಡ ತಮಗೆ ವಹಿಸಿದಂತಹ ಕೆಲಸವನ್ನು ಚಾಚು ತಪ್ಪದೇ ಮಾಡಬೇಕು’ ಎಂದರು.ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ, ರೈತರ ಹಿತಕ್ಕಾಗಿ ಮತ್ತು ಸಾರ್ವಜನಿಕರ ಹಿತಕ್ಕಾಗಿ ತಾಲೂಕು ಕಚೇರಿಯ ಎಲ್ಲಾ ದಾಖಲಾತಿಗಳನ್ನು ಕಂಪ್ಯೂಟರೀಕರಣ ಮಾಡಲಾಗುತ್ತಿದೆ, ರಾಜ್ಯ ಸರ್ಕಾರದ ಆದೇಶದ ಅನ್ವಯ ರೈತರ ಮತ್ತು ಸಾರ್ವಜನಿಕರ ಹಿತ ಕಾಪಾಡುವ ಸಲುವಾಗಿ ಕಂದಾಯ ಇಲಾಖೆಯಲ್ಲಿ ಇರುವಂತಹ ಎಲ್ಲಾ ದಾಖಲಾತಿಗಳನ್ನು ಕಂಪ್ಯೂಟರೀಕರಣ ಮಾಡುವ ಗುರಿಯನ್ನು ಹೊಂದಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೊದಲು ಚನ್ನರಾಯಪಟ್ಟಣ ತಾಲೂಕಿಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ, ಸುಮಾರು ೧೦ ಕಂಪ್ಯೂಟರ್, ಹತ್ತು ಜನ ಡಾಟಾ ಎಂಟ್ರಿ ಆಪರೇಟರ್ ಸೇರಿದಂತೆ ಸುಮಾರು ೨೫ ಲಕ್ಷಕ್ಕೂ ಅಧಿಕ ಪುಟಗಳಿರುವ ದಾಖಲಾತಿಗಳನ್ನು ಕಂಪ್ಯೂಟರೀಕರಣ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಆದೇಶದಂತೆ ಸುಮಾರು ೧೦೦ ದಿನಗಳ ಕಾಲಾವಕಾಶವನ್ನು ಕೂಡ ನೀಡಲಾಗಿದೆ. ಇದರ ಮೂಲ ಉದ್ದೇಶ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರು ನೀಡಿದಂತಹ ದಾಖಲಾತಿಗಳು ಮತ್ತು ಕೆಲ ದಾಖಲಾತಿಗಳು ನಶಿಸಿ ಹೋಗುತ್ತಿವೆ ಎಂಬ ಮೂಲ ಉದ್ದೇಶವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಈ ಚಿಂತನೆಯನ್ನು ನಡೆಸಿದೆ ಇದರಲ್ಲಿ ಯಾವುದೇ ದಾಖಲಾತಿಗಳು ಬೇಕಾದರೂ ಇಂತಹ ದಾಖಲಾತಿಗಳು ಇಂತಹ ಕಡತದಲ್ಲಿವೆ ಎಂಬ ಕಂಪ್ಯೂಟರ್‌ನಲ್ಲಿ ವೀಕ್ಷಣೆ ಮಾಡಿ ನಂತರ ಕಂಪ್ಯೂಟರ್ ಮೂಲಕ ನಕಲನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಶಾಂತಕುಮಾರಿ, ತಾಲೂಕು ದಂಡಾಧಿಕಾರಿ ಗೋವಿಂದರಾಜ್ ಹಾಜರಿದ್ದರು.