- - ಡಾ.ಎಚ್.ಸಿ. ಮಹದೇವಪ್ಪಕನ್ನಡಪ್ರಭ ವಾರ್ತೆ ಮೈಸೂರು
ಬಜೆಟ್ ಎಂದರೆ ಜನರ ಆಶೋತ್ತರಗಳ ಕನ್ನಡಿಯಾಗಿರಬೇಕೇ ವಿನಃ ಮೌಖಿಕ ಘೋಷಣೆ ಅಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.ಕೇಂದ್ರದ ಬಜೆಟ್ ಅನ್ನು ಸೂಕ್ಷ್ಮವಾಗಿ ನೋಡುವಾಗ ಜನರ ಬದುಕಿನ ದೃಷ್ಟಿಯಿಂದ ರೂಪಿಸಲಾಗುವ ಸಾಕಷ್ಟು ಅಂಶಗಳು ಇಲ್ಲದಂತೆಯೇ ತೋರಿತು. ಮುಖ್ಯವಾಗಿ ಜನರ ಸಂಖ್ಯೆ ಮತ್ತು ಅವರ ಅಸ್ತಿತ್ವವನ್ನು ಅರಿತುಕೊಳ್ಳುವ ಸಲುವಾಗಿ ಜನ ಗಣತಿಯನ್ನು 2021 ರಲ್ಲೇ ಮಾಡಬೇಕಿತ್ತು. ಆದರೆ, ಈಗಲೂ ಜನಗಣತಿಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ಜನಗಣತಿಯ ಅನುದಾನದ ಏರಿಕೆ ಮತ್ತು ಇಳಿಕೆಯ ಬಗ್ಗೆಯೇ ಕೇಂದ್ರವು ಚಿಂತಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವು ಇನ್ನೂ ಜಾತಿ ಗಣತಿಯನ್ನು ನಡೆಸದೇ ನೇರವಾಗಿ ಇವರು 25 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ ಎಂದು ಘೋಷಣೆ ಮಾಡುತ್ತಿದ್ದು, ಇದೊಂದು ಆಧಾರರಹಿತವಾದ ಮತ್ತು ತರ್ಕವಿಲ್ಲದ ಸಂಗತಿಯಾಗಿದೆ. ಭಾರತವು ಜಾಗತಿಕ ಹಸಿವಿನ ಸೂಚ್ಯಾಂಕದಲ್ಲಿ 2014ರ ವೇಳೆಗೆ 55ನೇ ಸ್ಥಾನದಲ್ಲಿದ್ದು, ಈ ದಿನ ಅದು 103ನೇ ಸ್ಥಾನಕ್ಕೆ ಕುಸಿದಿದೆ. ಇದು ಬಡತನದ ಸಂಕೇತವೇ ಹೊರತು ಶ್ರೀಮಂತಿಕೆಯ ಸೂಚಕವಲ್ಲ. ಹೀಗಾಗಿ, ಕೇಂದ್ರ ಸರ್ಕಾರದ ಘೋಷಣೆಯು ಮಹಾನ್ ಸುಳ್ಳುಗಳ ಕಂತೆಯಾಗಿದೆ ಎಂದು ಅವರು ದೂರಿದ್ದಾರೆ.ಕೇಂದ್ರ ಸರ್ಕಾರವು ತಮ್ಮ ಬಜೆಟ್ ನಲ್ಲಿ ಯುವಕರು, ಮಹಿಳೆಯರು, ನಿರುದ್ಯೋಗ ಹಾಗೂ ರೈತರು ಎಂಬ ಪದಗಳನ್ನು ಜನರ ಎದುರು ಹೇಳಿದೆ. ಈ ಪ್ರಕಾರವಾಗಿ ನೋಡುವುದಾದರೆ 2014ರ ಚುನಾವಣೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದು, ಆ ಭರವಸೆಯನ್ನು ಈಡೇರಿಸಿಲ್ಲ. ಜೊತೆಗೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಈಗ ನೋಡಿದರೆ ಆ ಭರವಸೆ ಈಡೇರಿಲ್ಲ. ಅಲ್ಲದೇ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರ ರಕ್ಷಣಾ ಪ್ರಮಾಣವೂ ಕುಸಿದಿದೆ. ಹೀಗಾಗಿ, ಇವರ ಬಜೆಟ್ ನ ಘೋಷಣೆಗಳು ವಾಸ್ತವದಲ್ಲಿ ಅವರನ್ನೇ ಅಣಕಿಸಿಕೊಳ್ಳುವ ಘೋಷಣೆಗಳಾಗಿವೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಒಳಗೆ ಲಕ್ಷಾಂತರ ಬ್ಯಾಕ್ ಲಾಗ್ ಹುದ್ದೆಗಳು ಇದ್ದು, ಅವುಗಳನ್ನು ತುಂಬುವ ಬಗ್ಗೆ ಇವರು ಕನಿಷ್ಠ ಯೋಚನೆಯನ್ನೂ ಮಾಡದೇ ನಮ್ಮ ಸರ್ಕಾರ ಯುವಕರ ಪರವಾಗಿದೆ ಎಂದು ಹೇಳುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಎಂದು ತಿಳಿಯದಾಗಿದೆ. ಹೊಸದಾಗಿ ಮಾಡುವ ಜನಗಣತಿಯ ಆಧಾರದಲ್ಲಿ ಮತಕ್ಷೇತ್ರಗಳ ಪುನರ್ ವಿಂಗಡಣೆ ಮಾಡಬೇಕಾದ್ದು ಸರ್ಕಾರದ ಜವಾಬ್ದಾರಿ ಆಗಿದೆ. ಆದರೆ, ಒಂದು ಸರಳವಾದ ಜನಗಣತಿಯನ್ನೇ ಮಾಡದೇ ಇರುವಂತಹ ಸಂದರ್ಭದಲ್ಲಿ ಜನಗಣತಿಯ ಆಧಾರದಲ್ಲಿ ಪುನರ್ ವಿಂಗಡಣೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.ಕಳೆದ 10 ವರ್ಷಗಳ ತಮ್ಮ ಆಡಳಿತದಲ್ಲಿ ಸಾಕಷ್ಟು ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣಗೊಳಿಸಿದ್ದು, ಸಂವಿಧಾನಾತ್ಮಕ ಮೀಸಲಾತಿ ಕಲ್ಪನೆಯ ವಿರುದ್ಧ ಕೆಲಸ ಮಾಡಿದ್ದು, ಮೀಸಲಾತಿಯನ್ನು ಕ್ರಮೇಣವಾಗಿ ಇಲ್ಲವಾಗಿಸುವ ಕೆಟ್ಟ ಉದ್ದೇಶವನ್ನು ಹೊಂದಿರುವುದು ಈ ಮೂಲಕ ಸ್ಪಷ್ಟವಾಗಿದೆ. ಈ ಮೂಲಕ ಮಧ್ಯಂತರ ಬಜೆಟ್ ಎಂಬುದು ಯಾವುದೇ ರೀತಿಯಲ್ಲಿ ದೂರದೃಷ್ಟಿ ಇಲ್ಲದ ಮತ್ತು ವಿವರಗಳನ್ನು ಅರಿಯದೆ ಇರುವ ಬಹುಜನರ ಆಶೋತ್ತರಗಳನ್ನು ಮಣ್ಣುಪಾಲು ಮಾಡುವ ಬಜೆಟ್ ಆಗಿದ್ದು, ಇದು ಸಾಮಾಜಿಕ ನ್ಯಾಯಕ್ಕೆ ಮತ್ತು ಅವರೇ ಹೇಳಿದ ಭರವಸೆಗಳಿಗೆ ವಿರುದ್ಧವಾಗಿರುವ ಸಂಗತಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.