ನಂಜನಗೂಡಿನಲ್ಲಿ ಸಂವಿಧಾನ ಜಾಗೃತಿ ಸ್ತಬ್ಧಚಿತ್ರಕ್ಕೆ ಸ್ವಾಗತ

KannadaprabhaNewsNetwork | Published : Feb 3, 2024 1:46 AM

ಸಾರಾಂಶ

ಎಲ್ಲರಿಗೂ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಂವಿಧಾನ ಜಾಥಾ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದ್ದು, ಈ ರಥವು ಮುಂದಿನ 10 ದಿನಗಳ ಕಾಲ ಎಲ್ಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಸಂವಿಧಾನ ಅರಿವು ಕಾರ್ಯಕ್ರಮ ನಡೆಸಿ ಜನರಲ್ಲಿ ಕಾನೂನಿನ ಬಗ್ಗೆ, ಸಂವಿಧಾನದ ಬಗ್ಗೆ ಅರಿವು ಮೂಡಿಸಲಿದೆ

ಕನ್ನಡಪ್ರಭ ವಾರ್ತೆ ನಂಜನಗೂಡು

75ನೇ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಈ ಸಂವಿಧಾನ ಜಾಗೃತಿ ಸ್ತಬ್ದಚಿತ್ರ ವಾಹನವು ತಾಲೂಕಿನಲ್ಲಿ 10 ದಿನಗಳ ಕಾಲ ಸಂಚರಿಸಿ ಜನರಲ್ಲಿ ಸಂವಿಧಾನ ಅರಿವು ಮೂಡಿಸಲಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಸಂವಿಧಾನ ಜಾಗೃತಿ ಸ್ತಬ್ಧಚಿತ್ರವನ್ನು ನಂಜನಗೂಡಿಗೆ ಬರಮಾಡಿಕೊಂಡು ಪುಷ್ಪಾರ್ಚನೆ ಸಲ್ಲಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಾನ ಅವಕಾಶಗಳು ದೊರಕಿವೆ. ಅಲ್ಲದೆ ಸಂವಿಧಾನದಿಂದಲೇ ನಾನು ಕ್ಷೇತ್ರದಲ್ಲಿ ಅತಿ ಕಿರಿಯ ವಯಸ್ಸಿನ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಸಂವಿಧಾನ ನಮ್ಮೆಲ್ಲರಿಗೂ ಉತ್ತಮ ಗ್ರಂಥವಾಗಿದ್ದು, ಎಲ್ಲರೂ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕಾದ ಗ್ರಂಥವಾಗಿದೆ. ಎಲ್ಲರಿಗೂ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಂವಿಧಾನ ಜಾಥಾ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದ್ದು, ಈ ರಥವು ಮುಂದಿನ 10 ದಿನಗಳ ಕಾಲ ಎಲ್ಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಸಂವಿಧಾನ ಅರಿವು ಕಾರ್ಯಕ್ರಮ ನಡೆಸಿ ಜನರಲ್ಲಿ ಕಾನೂನಿನ ಬಗ್ಗೆ, ಸಂವಿಧಾನದ ಬಗ್ಗೆ ಅರಿವು ಮೂಡಿಸಲಿದೆ ಎಂದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಜಾಗೃತಿ ಜಾಥಕ್ಕೆ ಚಾಲನೆ ನೀಡಲಾಯಿತು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ನಗರಸಭಾ ಸದಸ್ಯರಾದ ಎಸ್.ಪಿ. ಮಹೇಶ್, ಎನ್.ಎಸ್. ಯೋಗೀಶ್, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಇಓ ಜೆರಾಲ್ಡ್ ರಾಜೇಶ್, ಡಿವೈಎಸ್ಪಿ ರಘು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾವ್ ವಡ್ಡಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ನಗರಸಭಾ ಆಯುಕ್ತ ನಂಜುಂಡಸ್ವಾಮಿ, ಮುಖಂಡರಾದ ನಾಗರಾಜಯ್ಯ, ಮುದ್ದುಮಾದಶೆಟ್ಟಿ ಇದ್ದರು.ಕೆ

Share this article