ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕ.ಸಾ.ಪ ಕಾರ್ಯಕಾರಿಣಿ ಸಮಿತಿ ಸಭೆ
ಕಡೂರು ತಾಲೂಕಿನ ಗಿರಿಯಾಪುರ ಗುರು ಕೃಪ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜನವರಿ ಯಲ್ಲಿ ಹಾಗೂ ರಾಜ್ಯ ಮಟ್ಟದ ಚುಟುಕು ಸಮ್ಮೇಳನವನ್ನು ಶೃಂಗೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಭಾನುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಿರಿಯಾಪುರ ಶಾಲೆಯಲ್ಲಿ 500 ಮಕ್ಕಳಿದ್ದು ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ 1 ಸಾವಿರ ಮಕ್ಕಳು ಸೇರುವ ನಿರೀಕ್ಷೆ ಇದೆ. ಮಕ್ಕಳ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಮಕ್ಕಳನ್ನೇ ಆಯ್ಕೆ ಮಾಡಲಿದ್ದೇವೆ. ಮುಂದಿನ ಫೆಬ್ರವರಿ ಅಥವಾ ಮಾರ್ಚ ತಿಂಗಳಲ್ಲಿ ಕಡೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ರಾಜ್ಯ ಮಟ್ಟದ ಚುಟುಕು ಸಮ್ಮೇಳನವನ್ನು ಶೃಂಗೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನ ಅಧ್ಯಕ್ಷರ ಆಯ್ಕೆ ಆಗಬೇಕಾಗಿದೆ. ಶೃಂಗೇರಿ ಶ್ರೀ ಮಠದಲ್ಲಿ ಸಮ್ಮೇಳನದ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ಗ್ರಾಮ ಸಮ್ಮೇಳನ, ಹೋಬಳಿ ಸಮ್ಮೇಳನ ನಡೆಸಲು ಚರ್ಚೆ ನಡೆಸಲಾಗುತ್ತಿದೆ. ಈ ಹಿಂದೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಕಸಾಪ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗುತ್ತಿತ್ತು. ಈ ವರ್ಷದಿಂದ ತಾಲೂಕು ಕೇಂದ್ರದಲ್ಲೂ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿದ್ದೇವೆ. ಕಸಾಪ ಮುಖ್ಯ ಕಾರ್ಯಕ್ರಮವಾದ ನುಡಿ ನಿತ್ಯೋತ್ಸವ, ಶ್ರಾವಣ ಸಂಜೆ ಕಾರ್ಯಕ್ರಮ ಈಗಾಗಲೇ ನಡೆಸಲಾಗಿದೆ. ಶ್ರಾವಣ ಮಾಸದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಎಲ್ಲಾ ತಾಲೂಕುಗಳಲ್ಲೂ ಉತ್ತಮವಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
-- ಬಾಕ್ಸ್ --
ಜಿಲ್ಲೆಯಲ್ಲಿ 188 ದತ್ತಿಗಳಿದ್ದು ಎಲ್ಲಾ ದತ್ತಿ ಉಪನ್ಯಾಸ ಮುಕ್ತಾಯವಾಗಿದೆ. ದತ್ತಿ ದಾನ ನೀಡಿದ ಹಣವನ್ನು ಬ್ಯಾಂಕಿನಲ್ಲಿಟ್ಟು ಬಡ್ಡಿಯಿಂದ ದತ್ತಿ ಉಪನ್ಯಾಸ ಮಾಡಲಾಗುತ್ತಿತ್ತು. ಬಡ್ಡಿ ಕಡಿಮೆ ಬರುತ್ತಿರುವುದರಿಂದ 3-4 ದತ್ತಿ ಸೇರಿಸಿ ಉಪನ್ಯಾಸ ಹಮ್ಮಿಕೊಳ್ಳುತ್ತಿದ್ದೇವೆ. 24 ವರ್ಷಗಳ ಹಿಂದೆ ಅಜ್ಜಂಪುರ ಸೂರಿ ಕಸಾಪ ಜಿಲ್ಲಾಧ್ಯಕ್ಷರಾಗಿದ್ದಾಗ ಸಾಹಿತಿಗಳ ಮಾಹಿತಿ ಕೋಶ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈಗ ಈ ಮಾಹಿತಿ ಕೋಶಕ್ಕೆ ಹೊಸ ಲೇಖಕರ ಮಾಹಿತಿ ನೀಡಿ ಹೊಸದಾಗಿ ಮಾಹಿತಿ ಕೋಶ ಹೊರತರಲಾಗುವುದು. ಜಿಲ್ಲೆಯ ದಾನಿಗಳನ್ನು ಹಿಡಿದು ಈ ಕಾರ್ಯಕ್ರಮ ಮುಂದುವರಿಸುವ ಚಿಂತನೆ ನಡೆಸಿದ್ದೇವೆ ಎಂದು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಚಿಕ್ಕಮಗಳೂರು ಕನ್ನಡ ಭವನ ನವೀಕರಣ