ದೇವನಹಳ್ಳಿ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ೩.೯೬ ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಾಗೂ ೩.೯೬ ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆಯನ್ನು ನೆರವೇರಿಸಿ ಸಚಿವರು ಮಾತನಾಡಿದರು.ಹಾಸ್ಟೆಲ್ಗಳಲ್ಲಿ ನೆಲೆಸುವ ಮಕ್ಕಳಿಗೆ ಓದಲು ಹೆಚ್ಚಿನ ಸಮಯ ಸಿಗುತ್ತದೆ. ಒಳ್ಳೆಯ ಅವಕಾಶ ಪಡೆದು ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು. ಐಎಎಸ್, ಐಪಿಎಸ್, ಕೆಎಎಸ್, ಡಾಕ್ಟರ್, ಇಂಜಿನಿಯರ್ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಾಸ್ಟೆಲ್ ಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು, ಇದರಿಂದ ಮಕ್ಕಳ ಆರೋಗ್ಯ ಕಾಪಾಡಬೇಕು. ಮಕ್ಕಳು ಹೆಚ್ಚಿನ ಸಮಯ ಹಾಸ್ಟೆಲ್‌ಗಳಲ್ಲಿ ಕಳೆಯುವುದರಿಂದ ನಿಮ್ಮ ಮಕ್ಕಳಂತೆ ಅವರ ಮೇಲೆ ಅದೇ ಕಾಳಜಿ ವಹಿಸಿ ನೋಡಿಕೊಳ್ಳಬೇಕು ಎಂದು ನಿಲಯದ ಮೇಲ್ವಿಚಾರಕರಿಗೆ ತಿಳಿಸಿದ ಸಚಿವರು, ಪ್ರತಿ ವಾರ ಹಾಸ್ಟೆಲ್ ವಿಸಿಟ್ ಮಾಡಿ ಅಲ್ಲೇ ಊಟ ಮಾಡಿ, ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿ, ಏನು ಸೌಲಭ್ಯ ಬೇಕೆನ್ನುವದನ್ನು ಗಮನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಜಗನ್ನಾಥ, ಪುರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣ, ಮುಖಂಡರಾದ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಯಶ್ರೀ ಹೆಂಡೇಗಾರ್, ತಹಶೀಲ್ದಾರ್ ಅನಿಲ್, ಇಒ ಶ್ರೀನಾಥ್ ಗೌಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
(ಫೋಟೋ ಕ್ಯಾಫ್ಷನ್)ದೇವನಹಳ್ಳಿ ಟೌನ್ ನಲ್ಲಿ ನಿರ್ಮಿಸಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ನೂತನ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು.