- ತೇಜಸ್ವಿ ಚಿಂತನೆ-ಸಮಕಾಲೀನ ತಲ್ಲಣಗಳಿಗೆ ಉತ್ತರ'''''''' ವಿಶೇಷ ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಬಾಲ್ಯಾವಸ್ಥೆಯಲ್ಲಿದ್ದ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಆಗಲೇ ಲೋಹಿಯಾ ಅವರ ಸಮಾಜವಾದದ ಪ್ರಭಾವಕ್ಕೆ ಒಳಗಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಶಿವರಾಮಕಾರಂತರು ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. ಓದಿಗೆ ವಿದಾಯ ಹೇಳಿ ಅವರದೇ ಆದ ದಾರಿ ಕಂಡುಕೊಂಡಿದ್ದರು ಎಂದು ಕೊಪ್ಪದ ಬರಹಗಾರ ಹಾಗೂ ಚಿಂತಕ ನಂದಕುಮಾರ್ ಕುಂಬ್ರಿಉಬ್ಬು ಹೇಳಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಿಕ್ಕಮಗಳೂರು ಚಕೋರ ಸಾಹಿತ್ಯ ವಿಚಾರ ವೇದಿಕೆ , ಕೊಪ್ಪ ತಾಲೂಕು ಸಿರಿಗನ್ನಡ ವೇದಿಕೆ , ಸಹ್ಯಾದ್ರಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಕೊಪ್ಪದ ಲಕ್ಕವಳ್ಳಿ ಮಂಜಪ್ಪನಾಯಕ ಸಭಾಭವನದಲ್ಲಿ ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಚಾವಲ್ಮನೆ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ''''''''ತೇಜಸ್ವಿ ಚಿಂತನೆ-ಸಮಕಾಲೀನ ತಲ್ಲಣ ಗಳಿಗೆ ಉತ್ತರ'''''''' ಎಂಬ ವಿಶೇಷ ಉಪನ್ಯಾಸ ನೀಡಿದರು.
ಅವರು ಮೂಡಿಗೆರೆಗೆ ಬಂದು ತೋಟ ಮಾಡಿದರು. ನಂಜುಂಡಸ್ವಾಮಿ, ರಾಮದಾಸ್, ಕಡಿದಾಳ್ ಶಾಮಣ್ಣ, ತೇಜಸ್ವಿ ಇವರ ಆಪ್ತ ಸ್ನೇಹಿತರು. ವೈಚಾರಿಕ ಪ್ರಬುದ್ಧತೆ ಬೆಳೆಸಿಕೊಳ್ಳುತ್ತಾ ಬಂದರು. ಜಾಗತೀಕರಣದ ಬಗ್ಗೆ, ಆಗಾಗಿನ ಸಾಮಾಜಿಕ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಯೋಚನೆ ಮಾಡಿದರು. ರೈತಸಂಘ ಮುಂತಾದ ಸಂಘಟನೆಗಳ ಬಗ್ಗೆ ಆಸಕ್ತಿ ಇರಿಸಿಕೊಂಡಿದ್ದರು. "ಸರ್ಕಾರಿ ವ್ಯವಸ್ಥೆ ಹೇಗೆ ಜನರನ್ನು ಸಿಕ್ಕುಗಳಿಗೆ ಸಿಕ್ಕುಹಾಕುತ್ತದೆ ತುಂಬಾ ಚೆನ್ನಾಗಿ ತೇಜಸ್ವಿ ತಮ್ಮ ಕೆಲವು ಕೃತಿಗಳಲ್ಲಿ ಅನಾವರಣಗೊಳಿಸಿದ್ದಾರೆ. ಜನಸಾಮಾನ್ಯರ ದೈನಂದಿನ ಬದುಕಿನ ಸಮಸ್ಯೆಗಳ ಬಗ್ಗೆ ಸರಳವಾಗಿ ಬರೆಯುತ್ತಾ ಕನ್ನಡದಲ್ಲಿ ತಮ್ಮದೇ ಆದ ಶೈಲಿಯ ಸಾಹಿತ್ಯ ಧಾರೆ ಹರಿಸಿದರು. ತಮ್ಮ ಸಾಹಿತ್ಯದಲ್ಲಿ ಪರಿಸರ ಮನುಷ್ಯನ ನಡುವಿನ ಸಂಬಂಧದ ಬಗ್ಗೆ ಹೇಳುತ್ತಾ, ಪರಿಸರ ಬರಿಯ ಮರ, ಗಿಡ, ಬಳ್ಳಿಗಳಿಗೆ ಮಾತ್ರ ಸೀಮಿತವಾಗದೇ ಅದು ಮನುಷ್ಯನೂ ಕೂಡ ಅದರ ಅವಿಭಾಜ್ಯ ಅಂಗ ಎಂಬುದನ್ನು ಅವರು ಪ್ರತಿಪಾದಿದ್ದರು. ಮೌಡ್ಯಗಳ ಬಗ್ಗೆಯೂ ತಮ್ಮ ಸಾಹಿತ್ಯದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನವ್ಯದ ನಂತರ ಬಂದ ಲೇಖಕರಲ್ಲಿ ಇಂತಹ ಚಿಂತನೆಯುಳ್ಳವರು ವಿರಳ. ಕನ್ನಡ ಅನ್ನದ ಭಾಷೆಯಾದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂಬುದು ಅವರ ಅನಿಸಿಕೆಯಾಗಿತ್ತು. ಲೇಖಕರಾಗಿ, ಕಾದಂಬರಿಕಾರರಾಗಿ, ಸೃಜನಶೀಲ ವ್ಯಕ್ತಿಯಾಗಿ,ಪರಿಸರ-ಪ್ರಾಣಿ-ಪಕ್ಷಿಗಳ ಬಗ್ಗೆ ತೀವ್ರ ಕುತೂಹಲಕಾರಿ ವ್ಯಕ್ತಿಯಾಗಿ ತೇಜಸ್ವಿಯವರನ್ನು ಗಂಭೀರವಾಗಿ ಅಧ್ಯಯನ ಮಾಡುವುದು ಇಂದಿನ ಯುವಜನಾಂಗದ ತುರ್ತು ಅಗತ್ಯಗಳಲ್ಲೊಂದು ಎಂದು ನುಡಿದರು.ಚಕೋರ ಜಿಲ್ಲಾ ಸಂಚಾಲಕ ಧನಂಜಯ ಮೂರ್ತಿ, ಚಾವಲ್ಮನೆ ಸುರೇಶ್ ನಾಯಕ್ ಮಾತನಾಡಿದರು.ಸಹ್ಯಾದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರಭಾ ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಲಯನ್ಸ್ ಕ್ಲಬ್‌ನ ಮಹಿಳಾ ಸದಸ್ಯರಿಂದ ಕನ್ನಡ ಗೀತಗಾಯನ ನಡೆಯಿತು. ಸುಧೀರ ಕುಮಾರ್ ಮೂರೊಳ್ಳಿ, ದುರ್ಗಾಚರಣ್, ನವೀನ್ ಮಾವಿನಕಟ್ಟೆ, ಡಾ.ಅನಿತಾ ನಟ ರಾಜ್, ಶೈಲಾ ಶೇಷಪ್ಪ, ನಿಲುಗುಳಿ ಪದ್ಮನಾಭ್, ಜಿನೇಶ್ ಇರ್ವತ್ತೂರು, ನಾಗರಾಜ್ ಬಿ.ಡಿ, ರೇಣುಕಾಪದ್ಮನಾಭ್, ಜುಬೇರ್ ಅಹಮದ್, ಫ್ರಾನ್ಸಿಸ್ ಕಾರ್ಡೋಜ, ಜಗದೀಶ್, ಶುಕುರ್ ಅಹಮದ್, ಕಾವೇರಪ್ಪ, ಶಾಂತಾ ಗೋಪಾಲಗೌಡ, ಗೋಪಾಲ ಗೌಡ, ಜಯಮ್ಮ, ಸುಮಗೌರಿಗದ್ದೆ, ರೂಪಕಲಾ, ಸುನೀತಾ ನೆಲಗದ್ದೆ, ಸಿದ್ದಿಕ್, ರಾಜಾಶಂಕರ್ ಮುಂತಾದವರಿದ್ದರು.