ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಗಳನ್ನು ಸಮುದಾಯ ಎದುರಿಸುತ್ತಿದೆ. ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ರಾಜಕೀಯ ,ಶೈಕ್ಷಣಿಕ, ಸಾಮಾಜಿಕವಾಗಿ ಹಿನ್ನಡೆಯಾಗಿದೆ. ಸಮುದಾಯದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ .
ಕನ್ನಡಪ್ರಭ ವಾರ್ತೆ,ದೊಡ್ಡಬಳ್ಳಾಪುರ
ರಾಜ್ಯದಲ್ಲಿ ಛಲವಾದಿ ಸಮುದಾಯ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಪರಿಹರಿಸಿ, ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡಬೇಕಿದೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ನರೇಶ್ ತಿಳಿಸಿದರು.
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರಲ್ಲಿ ಛಲವಾದಿ ಮಹಾಸಭಾ ವತಿಯಿಂದ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬೇರೆ ಅನೇಕ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮ- ಮಂಡಳಿಗಳಿವೆ. ಆದರೆ ನಮ್ಮ ಸಮುದಾಯಕ್ಕಿಲ್ಲ. ನಮ್ಮಲ್ಲಿ ಭಿನ್ನಾಭಿಪ್ರಾಯ ಇದ್ದರೂ ಕೂಡ ಎಲ್ಲರೂ ಒಟ್ಟಿಗೆ ಇರಬೇಕು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಲ್ಕೂ ತಾಲೂಕುಗಳಿಂದ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಹಂತದಲ್ಲಿ ನನ್ನ ಆಯ್ಕೆಗೆ ಕೃತಜ್ಞತೆ ಸಲ್ಲಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಗಳನ್ನು ಸಮುದಾಯ ಎದುರಿಸುತ್ತಿದೆ. ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ರಾಜಕೀಯ ,ಶೈಕ್ಷಣಿಕ, ಸಾಮಾಜಿಕವಾಗಿ ಹಿನ್ನಡೆಯಾಗಿದೆ. ಸಮುದಾಯದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದರು.
ಸಮುದಾಯದ ಮುಖಂಡ ತಿಮ್ಮರಾಯಪ್ಪ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ವರ್ಷದಿಂದ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರ ಹುದ್ದೆ ಖಾಲಿ ಇತ್ತು. ತಾಲೂಕು ಮಟ್ಟದ ಪದಾಧಿಕಾರಿಗಳೇ ಕೆಲಸ ಮಾಡುತ್ತಿದ್ದರು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸಮಿತಿಯೂ ತಾಲೂಕು ಪದಾಧಿಕಾರಿಗಳಿಂದ ಅರ್ಜಿ ಪಡೆದು, ಜ.24 ರಂದು ಸಮುದಾಯದ ಮುಖಂಡ ನೇತೃತ್ವದಲ್ಲಿ ಆಯ್ಕೆ ಮಾಡಿದ್ದರು. ಅವರು ಎಲ್ಲ ತಾಲೂಕಿನ ಸಮುದಾಯ ಮುಖಂಡರ ಭೇಟಿ ಮಾಡಿ, ತಾಲೂಕಿನ ಪದಾಧಿಕಾರಿಗಳ ಆಯ್ಕೆ ಮಾಡಬೇಕು. ಅಧ್ಯಕ್ಷರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು. ಛಲವಾದಿ ಮಹಾಸಭಾ ಜತೆಗೆ ಕರ್ನಾಟಕ ಛಲವಾದಿ ಮಹಾ ಸಭಾ ವಿಲೀನ ಮಾಡಲು ತೀರ್ಮಾನಿಸಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು ಎಂದರು.
ಈ ವೇಳೆಯಲ್ಲಿ ಮುಖಂಡರಾದ ಗೂಳ್ಯ ಹನುಮಣ್ಣ, ರಾಜಶೇಖರ್, ನಾರಾಯಣ, ಮರಿಯಪ್ಪ, ತಿಮ್ಮರಾಯಪ್ಪ, ಮದ್ದೂರಣ್ಣ, ಸುರೇಶ್ ನಾರಾಯಣ, ಅಜಯ್, ರಾಮಣ್ಣ ಸೇರಿದಂತೆ ಅನೇಕರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.