ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಬಹಳ ವೇಗವಾಗಿ ನಡೆಯುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯ ಸರ್ಕಾರ ಆದೇಶದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯರ ರಾಜ್ಯದಾದ್ಯಂತ ಪ್ರಾರಂಭವಾಗಿದೆ. ರಾಜ್ಯದಲ್ಲಿ 12285 ಬ್ಲಾಕ್ ಗಳಲ್ಲಿ ಸಮೀಕ್ಷೆ ನೆಡೆಯಲ್ಲಿದ್ದು, ಸಮೀಕ್ಷೆಗೆ ಶಾಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಒಟ್ಟು 6544 ಬ್ಲಾಕ್ ಗಳಲ್ಲಿ, ಒಟ್ಟು 7,55,483 ಮನೆಗಳನ್ನು ಒಳಗೊಂಡಂತೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರಿನಲ್ಲಿ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 6537 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಒಂದೇ ದಿನದಲ್ಲಿ 73910 ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಮಾಹಿತಿಯನ್ನುಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.ಸಮೀಕ್ಷೆ ಪ್ರಾರಂಭದಲ್ಲಿ ತಾಂತ್ರಿಕ ತೊಂದರೆಗಳ ಹಿನ್ನೆಲೆಯಲ್ಲಿ ಸಮೀಕ್ಷಾ ಆಪ್ ನಲ್ಲಿ ಪ್ರಸ್ತುತ 3.6 ಆವೃತ್ತಿ ಅಪ್ಡೇಡ್ ಮಾಡಲಾಗಿದ್ದು, ಪ್ರಸ್ತುತ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ಸಮೀಕ್ಷೆ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ತಹಶೀಲ್ದಾರರು ಹಾಗೂ ಇಓಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದ್ದು, ಇವರನ್ನು ಬೇರೆ ಯಾವುದೇ ಇತರೆ ಕೆಲಸಗಳನ್ನು ವಹಿಸಿರುವುದಿಲ್ಲ. ಅಕ್ಟೋಬರ್ 7 ರೊಳಗೆ ತುಮಕೂರು ಜಿಲ್ಲೆಯ 755483 ಮನೆಗಳ ಸಮೀಕ್ಷೆ ನಿಶ್ಚಯವಾಗಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ತುಮಕೂರು ಮೆಟ್ರೋ ಮತ್ತಷ್ಟು ಹತ್ತಿರ: ಸಚಿವ ಡಾ.ಜಿ.ಪರಮೇಶ್ವರ್ಬಹು ನಿರೀಕ್ಷಿತ ತುಮಕೂರು ಮೆಟ್ರೊ ಮತ್ತಷ್ಟು ಹತ್ತಿರವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2024-25 ನೇ ಸಾಲಿನ ಆಯವ್ಯಯದಲ್ಲಿ ಮಾದಾವರದಿಂದ ತುಮಕೂರಿನವರೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಿಸುವ ಸಾಧ್ಯತೆಗಳ ಅಧ್ಯಯನ ಮಾಡುವುದಾಗಿ ಮುಖ್ಯಮಂತ್ರಿ ಅವರು ಘೋಷಣೆ ಮಾಡಿದ್ದರು. ಈ ಕಾರ್ಯುವನ್ನು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆಅಧ್ಯಯನ ಮಾಡಲು ಆದೇಶಿಸಲಾಗಿತ್ತು. ಬಿಎಂಆರ್ ಸಿಎಲ್ 3 ಕೋಟಿ ರು . ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿ ಹೈದರಾಬಾದ್ ಮೂಲದ ಕಂಪನಿಗೆ ಕಾರ್ಯಸಾಧು ಅಧ್ಯಯನ ಕಾರ್ಯ ನೀಡಿತ್ತು. ಇದೀಗ ಕಂಪನಿಯು ವರದಿ ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಿಳಿಸಿದರು.
ಪ್ರಸ್ತುತ ಸರ್ಕಾರ ವರದಿಯನ್ನು ಒಪ್ಪಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಬಿಎಂಆರ್‌ಸಿಎಲ್ ರವರಿಗೆ ಸೂಚಿಸಿದೆ. ಮೊದಲ ಹಂತದಲ್ಲಿರೂ. 20,649 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಚಿಂತಿಸಲಾಗಿದೆ. ಈಗಾಗಲೇ ಖಾಸಗಿ ಕಂಪನಿಗಳು ಆಸಕ್ತಿ ತೋರಿವೆ ಎಂದು ಸಚಿವರು ವಿವರಿಸಿದರು.ಈ ಕುರಿತು ಈಗಾಗಲೇ ಸರ್ಕಾರ ಸೆಪ್ಟೆಂಬರ್ 25 ರಂದು ಆದೇಶ ಹೊರಡಿಸಿದ್ದು, ಮಾದಾವರದಿಂದ ತುಮಕೂರಿನವರೆಗೆ 59.6ಕಿ.ಮೀ. ಮೆಟ್ರೋ ರೈಲು ವ್ಯವಸ್ಥೆಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಲು ಬಿಎಂಆರ್ಸಿಎಲ್ ಗೆ ಮತ್ತೆ ಸೂಚಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಸೇರಿದಂತೆ ಮತ್ತಿತರರಿದ್ದರು.