ಕನ್ನಡಪ್ರಭ ವಾರ್ತೆ, ತುಮಕೂರುವೈಚಾರಿಕತೆ ಇಲ್ಲದ ಧರ್ಮ, ವಿಜ್ಞಾನವಿಲ್ಲದ ಧರ್ಮ ಹಾಗೂ ಧರ್ಮವೇ ಇಲ್ಲದ ವಿಜ್ಞಾನ ಎಂದಿಗೂ ಸರಿಯಲ್ಲ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಕುಲಪತಿ ಡಾ.ಭಗವಾನ್ ಅಭಿಪ್ರಾಯಪಟ್ಟರು.ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಸಂಶೋಧನಾ ಸಂಸ್ಥೆ ವತಿಯಿಂದ 2025-26 ನೇ ಸಾಲಿನ ನಾಲ್ಕನೇ ವರ್ಷದ ಎಂಬಿಬಿಎಸ್ ತರಗತಿಗಳ ಪ್ರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳಾದ ನೀವು ರೋಗಿಗಳೇ ದೇವರು, ಪಠ್ಯಗಳೇ ನಿಮ್ಮ ಬೈಬಲ್,ಕುರಾನ್ ಹಾಗೂ ಭಗವದ್ಗೀತೆ ಎಂದು ಅರ್ಥೈಸಿಕೊಂಡು ತಮ್ಮ ವಿದ್ಯಾರ್ಥಿ ಧರ್ಮ ಪಾಲಿಸುವ ಮೂಲಕ ಎಲ್ಲರಿಗೂ ಗೌರವ ನೀಡುತ್ತಾ ಉತ್ತಮ ವೈದ್ಯರಾಗಬೇಕು ಎಂದರು.ಮನುಕುಲಕ್ಕೆ ದಾಸೋಹ ಪರಂಪರೆಯನ್ನು ಪರಿಚಯಿಸಿದ ಸಿದ್ಧಗಂಗಾ ಮಠದ ಆರೋಗ್ಯ ಸೇವೆ ಶ್ಲಾಘನೀಯ. ಕೌಶಲ್ಯ ಹಾಗೂ ದೂರದೃಷ್ಠಿತ್ವವನ್ನು ಬೆಳಸಿಕೊಂಡು ಮುಂದುವರೆದ ವೈದ್ಯಕೀಯ ಸೌಲಭ್ಯಗಳನ್ನು ಉಪಯೋಗಿಸುವ ಚಾಕಚಕ್ಯತೆ ಹೊಂದ ಬೇಕು ಎಂದು ತಿಳಿಸಿದರು. ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತುಗಳ ಬಳಕೆ ಆಪಾಯವಾಗಿದ್ದು ಈ ಕುರಿತಾಗಿ ನಮ್ಮ ಯೂನಿವರ್ಸಿಟಿಯಿಂದ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ನಶಾ ಮುಕ್ತ ಭಾರತದ ಪರಿಕಲ್ಪನೆಯ ಸ್ತಬ್ಧಚಿತ್ರ ಕೂಡ ಸಾಗಲಿದೆ. ವಿದ್ಯಾರ್ಥಿಗಳೆಲ್ಲರು ಇದರ ಮಹತ್ವ ಅರಿತುಕೊಂಡು ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪಡೆದುಕೊಳ್ಳಬೇಕು ಎಂದರು. ಸಿದ್ದಗಂಗಾ ವೈದ್ಯಕೀಯ ಕಾಲೇಜಿನ ಕಾರ್ಯಕಾರಿ ನಿರ್ದೇಶಕ ಡಾ.ಎಸ್.ಸಚ್ಚಿದಾನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಮ್ಮ ಪೋಷಕರ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಆತಂಕ ಹಾಗೂ ಒತ್ತಡ ಮುಕ್ತವಾಗಿ ನಿಮಗೆ ದೊರೆಯುವ ಎಲ್ಲಾ ಅವಕಾಶಗಳು ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ಅಧ್ಯಯನಶೀಲರಾಗಬೇಕು. ರೋಗಿಗಳಿಗೆ ಆರೋಗ್ಯಸೇವೆ ಒದಗಿಸುವ ಮೂಲಕ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕು ಎಂದರು.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮೂರು ವರ್ಷದ ಕೂಸಾಗಿರುವ ನಮ್ಮ ವೈದ್ಯಕೀಯ ಕಾಲೇಜನ್ನು ಉತ್ಸಾಹ ಹಾಗೂ ಪ್ರೀತಿಯಿಂದ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹತ್ತಾರು ವರ್ಷಗಳ ಸಾಧನೆಯನ್ನು ನಮ್ಮ ಕಾಲೇಜು ಮೂರು ವರ್ಷಗಳಲ್ಲೇ ಸಾಧಿಸಿರುವುದು ನಮ್ಮ ಶೈಕ್ಷಣಿಕ ಸಾಮರ್ಥ್ಯ ಸಾಭೀತುಗೊಳಿಸಿದೆ ಎಂದರು. ಎಸ್ ಎಂ ಸಿ ಆರ್ ಐ ಪ್ರಾಚಾರ್ಯರಾದ ಡಾ.ಶಾಲಿನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಎಸ್.ಪರಮೇಶ್ ಸ್ವಾಗತಿಸಿದರು. ಸಿಇಒ ಡಾ.ಸಂಜೀವಕುಮಾರ್ ವಂದಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಡಾ.ಹುಲಿನಾಯ್ಕರ್, ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಡಪ್ಪ, ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವ ಸ್ವಾಮಿ, ಎಸ್‌ಎಂಸಿಆರ್‌ಐ ವೈದ್ಯಕೀಯ ಸೇವೆಗಳ ಕಾರ್ಯದರ್ಶಿ ಟಿ.ಎಂ.ಸ್ವಾಮಿ, ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ, ವೈದ್ಯಕೀಯ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ರಾದ ಡಾ.ನವೀನ್ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.