ಸಾಗುವಳಿ ಭೂ ಸ್ವಾಧೀನಕ್ಕೆ ರೈತರ ಆಕ್ರೋಶ

KannadaprabhaNewsNetwork |  
Published : Sep 30, 2025, 12:00 AM IST
್ಿ್ಿ್ಿ್ಿ | Kannada Prabha

ಸಾರಾಂಶ

ಅಕ್ಟೋಬರ್ 4 ರಿಂದ 6 ರವರೆಗೆ ಯೋಜನೆಯಿಂದ ಬಾಧಿತ ಪ್ರದೇಶಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳುವುದರ ಜೊತೆಗೆ, ಅಕ್ಟೋಬರ್ 13 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರಿನ ಔಟರ್ ರಿಂಗ್ ರೋಡ್ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ, ಅಕ್ಟೋಬರ್ 4 ರಿಂದ 6 ರವರೆಗೆ ಯೋಜನೆಯಿಂದ ಬಾಧಿತ ಪ್ರದೇಶಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳುವುದರ ಜೊತೆಗೆ, ಅಕ್ಟೋಬರ್ 13 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್ ರಸ್ತೆ ವಿರೋಧಿ ಹೋರಾಟ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಮಿತಿಯ ಮುಖಂಡರಾದ ಸಂಯುಕ್ತ ಹೋರಾಟ-ಕರ್ನಾಟಕ ಸಂಚಾಲಕರಾದ ಸಿ.ಯತಿರಾಜು, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಎಐಕೆಕೆಎಂಎಸ್‌ನ ಎಸ್.ಎನ್.ಸ್ವಾಮಿ, ಎಸ್.ಕೆ.ಎಂ.ಸಂಯೋಜಕರಾದ ಬಿ.ಉಮೇಶ್, ಎಐಕೆಎಸ್‌ನ ಕಂಬೇಗೌಡ, ಕೆಪಿಆರ್‌ಎಸ್‌ನ ಅಜ್ಜಪ್ಪ, ರಮೇಶ್ ಭೈರಸಂದ್ರ, ಸಿದ್ದಗಂಗಮ್ಮ, ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕ ಬೋರೇಗೌಡ ಹಾಗೂ ಬಾಧಿತ ಹಳ್ಳಿಗಳ ರೈತರು, ಜಿಲ್ಲಾಡಳಿತ ಭೂಸ್ವಾಧೀನ ಕಾಯ್ದೆ-೨೦೧೩ನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ರೈತರ ಒಪ್ಪಿಗೆಯಿಲ್ಲದೆ ಇದ್ದರೂ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ ಎಂದು ಆರೋಪಿಸಿದರು.ಸಂಯುಕ್ತ ಹೋರಾಟ-ಕರ್ನಾಟಕದ ಸಿ.ಯತಿರಾಜು ಮಾತನಾಡಿ, ಸರಕಾರ ಹೊಸ ಯೋಜನೆಯ ಹೆಸರಿನಲ್ಲಿ ರೈತರ ಫಲವತ್ತಾ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಇದರಿಂದ 750 ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ. ಅಲ್ಲದೆ ಸರಕಾರ ಯೋಜನೆಯ ಸಾಧಕ ಭಾಧಕಗಳ ಕುರಿತು ರೈತರೊಂದಿಗೆ ಚರ್ಚೆ ನಡೆಸದೆ, ದಬ್ಬಾಳಿಕೆ ನಡೆಸಲು ಮುಂದಾಗಿದೆ. ಸರಕಾರ ಕೂಡಲೇ ಯೋಜನೆಯಿಂದ ಹಿಂದೆ ಸರಿಯಬೇಕು. ಅಧಿಸೂಚನೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು. ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಪ್ರಸ್ತಾಪಿತ ನಂದಿಹಳ್ಳಿ, ಮಲ್ಲಸಂದ್ರ, ವಸಂತ ನರಸಾಪುರ ಔಟರ್‌ರಿಂಗ್ ರೋಡ್‌ಗೆ 44 ಹಳ್ಳಿಗಳ ಸುಮಾರು 650 ಎಕರೆ ಫಲವತ್ತಾದ ಭೂಮಿಯ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು ರೈತರ ಒಪ್ಪಿಗೆ ಇಲ್ಲದೆ, ರೈತರೊಂದಿಗೆ ಮಾತುಕತೆ ನಡೆಸದೆ ಹೊರಡಿಸಲಾಗಿದೆ. ಇದರಲ್ಲಿ ಸುಮಾರು 750 ಕುಟುಂಬಗಳು ಹಣ್ಣು ತರಕಾರಿ, ಹೂವು ಬೆಳೆಯುವುದರ ಜೊತೆಗೆ, ಅಡಿಕೆ, ತೆಂಗು ಇನ್ನಿತರ ತೋಟಗಾರಿಕಾ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಯೋಜನೆಯ ಸೋಷಿಯಲ್ ಇಂಪ್ಯಾಕ್ಟ್ ಬಗ್ಗೆ ಸರ್ವೆ ನಡೆಸದೆ ಭೂಸ್ವಾಧೀನಕ್ಕೆ ಮುಂದಾಗಿದೆ. ಹಾಗಾಗಿ ಯೋಜನೆಯನ್ನು ಕೈಬಿಡಬೇಕು. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಅಕ್ಟೋಬರ್ 4 ರಿಂದ 6ರವರೆಗೆ ಜಾಗೃತಿ ಜಾಥಾ ಕೈಗೊಳ್ಳಲಾಗಿದೆ. ಅಲ್ಲದೆ ಅಕ್ಟೋಬರ್ 13 ರಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಎಐಕೆಕೆಎಂಎಸ್‌ನ ಎಸ್.ಎನ್.ಸ್ವಾಮಿ ಮಾತನಾಡಿ, ೨೦೧೩ರ ಭೂಸ್ವಾಧೀನ ಕಾಯ್ದೆ ಪ್ರಕಾರ ಯೋಜನಾ ವ್ಯಾಪ್ತಿಗೆ ಒಳಪಡುವ ಶೇ೭೦ರಷ್ಟು ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನ ಮಾಡುವಂತಿಲ್ಲ. ಈ ಯೋಜನೆಯಿಂದ ತುಮಕೂರು ನಗರ ಸೇರಿದಂತೆ ಜಿಲ್ಲೆಗೆ ಆಹಾರದ ಅಭದ್ರತೆ ಉಂಟಾಗಲಿದೆ. ಹಾಗಾಗಿ ಶಾಸಕರು, ಸಂಸದರು, ಮಂತ್ರಿಗಳು ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪೋ

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ