ಶಿರಹಟ್ಟಿ: ರೈತರು ರಾಸಾಯನಿಕ ಗೊಬ್ಬರ ಬದಲು ಸಾವಯವ ಗೊಬ್ಬರ ಬಳಕೆ ಮಾಡಬೇಕು. ನೈಸರ್ಗಿಕ ಗೊಬ್ಬರ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಸಮತೋಲಿತವಾಗಿ ರೈತರು ಗೊಬ್ಬರ ಬಳಸಲು ಜಿಲ್ಲಾ ಜಂಟಿ ಕೃಷಿ ನಿರ್ದೇಶರಾದ ಚೇತನಾ ಪಾಟೀಲ ತಿಳಿಸಿದರು.ತಾಲೂಕಿನ ರಣತೂರ ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಭೂಮಿತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆಯಲ್ಲಿ ಮಾತನಾಡಿ, ಕೇವಲ ಡಿಎಪಿ ಮತ್ತು ಯೂರಿಯಾ ಗೊಬ್ಬರಗಳಿಗೆ ಸೀಮಿತಗೊಳಿಸದೇ ಕಾಂಪ್ಲೆಕ್ಸ್ ಗೊಬ್ಬರ ಉಪಯೋಗಿಸಿಕೊಳ್ಳಬೇಕು. ಸಾವಯವ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು.
ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ರೈತ ಬಸವರಾಜ ನಾವಿ ಮಾತನಾಡಿ, ಎರೆಹುಳು ಗೊಬ್ಬರ ಬಳಕೆಗೆ ಹೆಚ್ಚು ಒತ್ತು ನೀಡುವುದರಿಂದ ಉತ್ತಮ ಇಳುವರಿ ಬರುವುದಲ್ಲದೇ ಭೂ ಫಲವತ್ತತೆ ಯಥಾಸ್ಥಿತಿಯಾಗಿರುತ್ತದೆ. ರಾಸಾಯನಿಕ ಗೊಬ್ಬರಗಳಿಗೆ ಹೆಚ್ಚು ಹಣ ನೀಡುವುದರ ಬದಲಿಗೆ ಅದರ ಅರ್ಧದಷ್ಟು ಹಣವನ್ನು ಸಾವಯವ ಗೊಬ್ಬರಗಳಿಗೆ ಖರ್ಚ ಮಾಡಿದರೆ ಉತ್ತಮ ಫಸಲು ಪಡೆಯಬಹುದು ಎಂದರು.
ಜಿಲ್ಲಾ ಉಪ ಕೃಷಿ ನಿರ್ದೇಶಕರಾದ ಸ್ಫೂರ್ತಿ ಅವರು ಪ್ರಾತ್ಯಕ್ಷಿಕೆ ಮೂಲಕ ಬೀಜೋಪಚಾರ ಮಾಡುವ ವಿಧಾನ ಮತ್ತು ಬೀಜೋಪಚಾರ ಮಾಡುವುದರಿಂದ ಹೆಸರು, ಕಡಲೆ, ತೊಗರಿ ಬೆಳೆಗಳಲ್ಲಿ ಬೇರು ಕೊಳೆಯುವ ರೋಗವನ್ನು ತಡೆಗಟ್ಟಬಹುದು ಎನ್ನುವ ಕುರಿತು ರೈತರಿಗೆ ತಿಳಿಸಿದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಭೂಮಿತಾಯಿ ರಕ್ಷಣೆ ಕಣ್ಗಾವಲು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಅಧಿಕಾರಿ ಆರ್.ಸಿ. ಚಾಕಲಬ್ಬಿ ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮದ ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.