ಗಂಗಾರತಿ ಕಾರ್ಯಕ್ರಮದಲ್ಲಿ ಆಶೀರ್ವಚನ
ಕನ್ನಡಪ್ರಭ ವಾರ್ತೆ ಶಿರಸಿ
ನದಿಗಳನ್ನು ತಿರುಗಿಸುವುದು ಅಧರ್ಮದ ಕೆಲಸವಾಗಿದ್ದು, ಅದರ ವಿರುದ್ಧ ಹೋರಾಡಲು ಪೀಠ ಎದ್ದು ಬರುವಂತಾಯಿತು. ಧರ್ಮಕ್ಕಾಗಿ ಪೂಜೆಯ ಚಳವಳಿ ಹಮ್ಮಿಕೊಂಡಿದ್ದೇವೆ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.ಮುರೇಗಾರ ಫಾಲ್ಸ್‌ನಲ್ಲಿ ಶಾಂತಪುರ, ಕೀಸಲವಾಡ, ಮತ್ತಿಘಟ್ಟ ಮತ್ತು ಶಿವಳ್ಳಿ ಸೀಮೆ ವತಿಯಿಂದ ಆಯೋಜಿಸಿದ್ದ ಗಂಗಾರತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.ಹಿಂದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ಸತ್ಯಾಗ್ರಹಗಳನ್ನು ನಮ್ಮ ಹಿರಿಯರು ಹಮ್ಮಿಕೊಂಡಿದ್ದರು. ಆಳುವ ಸರ್ಕಾರದ ವಿರುದ್ಧ ಉಪವಾಸ ಸೇರಿದಂತೆ ಅನೇಕ ಸತ್ಯಾಗ್ರಹದ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದರು. ಅದೇ ರೀತಿ ನಾವಿಂದು ಸರ್ಕಾರವನ್ನು ಎಚ್ಚರಿಸಲು ಪೂಜೆ ಎನ್ನುವ ಚಳವಳಿಗೆ ಚಾಲನೆ ನೀಡಿದ್ದೇವೆ. ಇದು ನಿರಂತರ ನಡೆದು ಸರ್ಕಾರ ಜಿಲ್ಲೆಯಲ್ಲಿನ ನದಿ ತಿರುವು ಯೋಜನೆಗಳನ್ನು ಕೈ ಬೀಡುವಂತಾಗಬೇಕು ಎನ್ನುವ ಸಂದೇಶ ಸಾರಿದರು.
ಇದೇ ವೇಳೆ ಪತ್ರಕ್ಕೆ ಸಹಿ ಹಾಕುವ ಮೂಲಕ ಪತ್ರ ಚಳವಳಿಗೆ ಚಾಲನೆ ನೀಡಿದರು.
ನದಿ ಜೋಡಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಶ್ರೀಗಳು ನೀಡಿದ ಕರೆಯಿಂದ ಭಾರೀ ಶಕ್ತಿ ಬಂದಿದ್ದು, ಎಲ್ಲೆಡೆ ಗಂಗಾರತಿ ಅಭಿಯಾನ ನಡೆಯುತ್ತಿದೆ. ಇದು ಜನ ಜಾಗೃತಿಗೆ ಆ ಮೂಲಕ ಹೋರಾಟಕ್ಕೆ ಶಕ್ತಿ ತಂದಿದೆ ಎಂದು ಹೇಳಿದರು.ಆಕರ್ಷಕ ಗಂಗಾರತಿಮುರೇಗಾರ ಫಾಲ್ಸ್‌ನಲ್ಲಿ ನಡೆದ ಗಂಗಾರತಿ ಕಾರ್ಯಕ್ರಮ ಮನಸೂರೆಗೊಂಡಿದ್ದು, 10ಕ್ಕೂ ಹೆಚ್ಚು ತರಬೇತಿ ಪಡೆದ ಕಾರ್ಯಕರ್ತರು ಆರತಿ ಎತ್ತುವ ಮೂಲಕ ಗಮನ ಸೆಳೆಯುವುದಲ್ಲದೇ ಆರತಿಗೆ ಯಕ್ಷಗಾನ ಪದ್ಯ ಹಾಡಿದ್ದು ವಿಶೇಷವಾಗಿತ್ತು. ಇದೇ ವೇಳೆ ಚಂಡೆ, ಶಂಖ, ಜಾಗಡೆ ವಾದನಗಳೂ ನಡೆದು ನೆರೆದ ಭಕ್ತರು ಪುಳಕಿತರಾದರು.