-ಶೃಂಗೇರಿ ಶಾರದಾ ಪೀಠದಲ್ಲಿ ಗೋಪೂಜೆ, ಶಾರದಾಂಬೆ, ಚಂದ್ರಮೌಳೀಶ್ವರ ಸ್ವಾಮಿಗೆ ಪೂಜೆ । ವಿಧುಶೇಖರ ಭಾರತೀ ತೀರ್ಥರಿಂದ ವಿಶೇಷ ಪೂಜೆಕನ್ನಡಪ್ರಭ ವಾರ್ತೆ ಶೃಂಗೇರಿ
ಭಾನುವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ಹಬ್ಬ ನಡೆಯಲಿದ್ದು, ಮೊದಲ ದಿನ ಭಾನುವಾರ ನರಕ ಚತುರ್ದಶಿ, ಲಕ್ಷ್ಮೀ ಪೂಜೆ, ಸಹಿತ ಹಬ್ಬದ ಸಂಭ್ರಮಾಚರಣೆ ಕಂಡು ಬಂದಿತು.ಎರಡನೆಯ ದಿನವಾದ ಸೋಮವಾರ ತಾಲೂಕಿನೆಲ್ಲೆಡೆ ಹಬ್ಬದ ಸಂಭ್ರಮ ಕಂಡುಬಂದಿತು. ಪ್ರತಿವರ್ಷ ದೀಪಾವಳಿಯೊಂದಿಗೆ ಮಳೆಯ ಹಾವಳಿಯು ಆರಂಭವಾಗುತ್ತಿತ್ತು.
ಪಟಾಕಿ ಪ್ರಿಯರಲ್ಲಿ ನಿರಾಶೆ ಮೂಡಿಸುತ್ತಿತ್ತು. ಆದರೆ, ಈ ವರ್ಷ ಮಳೆಯಿಲ್ಲದ ಕಾರಣ ಪಟಾಕಿ ಪ್ರಿಯರಲ್ಲಿ, ಮಾರಾಟಗಾರರಲ್ಲಿ ಸಂತಸದ ಉತ್ಸಾಹ ಕಂಡುಬರುತ್ತಿದ್ದು, ಪಟಾಕಿ ಮಾರಾಟ ಮಳಿಗೆಗಳಲ್ಲಿ ಮಾರಾಟ ಜೋರಾಗಿದ್ಜು, ತಾಲೂಕಿನೆಲ್ಲೆಡೆ ಪಟಾಕಿ ಸದ್ದುಗಳು ಮೊಳಗುತ್ತಿವೆ.ಶ್ರೀಶಾರದಾ ಪೀಠದಲ್ಲಿ ಗೋಪೂಜೆ:ಶ್ರೀಶಾರದಾ ಪೀಠದಲ್ಲಿ ಸಂಪ್ರದಾಯದಂತೆ ಈ ವರ್ಷವೂ ದೀಪಾವಳಿ ಕಳೆಗಟ್ಟಿತ್ತು. ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ, ಶ್ರೀ ಶಾರದಾಂಬಾ ದೇವಾಲಯ ಸಹಿತ ಶ್ರೀಮಠದ ಆವರಣದಲ್ಲಿರುವ ದೇವಾಲಯಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಶ್ರೀಮಠದ ಸಂಪ್ರದಾಯದಂತೆ ವಾದ್ಯ ಮೇಳ, ಛತ್ರಿ ಚಾಮರ, ವೇದಘೋಷಗಳೊಂದಿಗೆ ಬಂದ ಶ್ರೀವಿಧುಶೇಖರ ಭಾರತೀ ತೀರ್ಥರು ಗೋವುಗಳಿಗೆ ವಿಶೇಷ ಪೂಜೆ ನೆರವೇರಿಸಿ ಗೋವುಗಳಿಗೆ ತಿಂಡಿ ತಿನ್ನಿಸಿದರು. ಆನೆಗಳಿಗೂ ಪೂಜೆ ನೆರವೇರಿಸಿದರು.ತಾಲೂಕಿನ ಪಟ್ಟಣ ಸೇರಿದಂತೆ ಕಸಬಾ ಹೋಬಳಿಯ ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೂ ದೀಪಾವಳಿ ಸಂಭ್ರಮ ಕಂಡುಬಂದಿತು. ಬೆಳಿಗ್ಗೆಯಿಂದ ಗೋಪೂಜೆ ನಡೆಯಿತು. ಜಾನುವಾರುಗಳಿಗೆ ಸ್ನಾನ ಮಾಡಿಸಿ ಮೈಮೇಲೆ ಕೆಮ್ಮಣ್ಣು, ಜೇಡಿ ಬೊಟ್ಟು ಹಾಕಿ, ಸ್ವಚ್ಛಗೊಳಿಸಿದ ಕೊಟ್ಟಿಗೆಯಲ್ಲಿ, ಮನೆಯಂಗಳಗಳಲ್ಲಿ ಜಾನುವಾರುಗಳನ್ನು ಕಟ್ಟಿ ಹೂಮಾಲೆಗಳನ್ನು ತೊಡಿಸಿ ಗೋಪೂಜೆ ನೆರವೇರಿಸಿದರು.
ಶೃಂಗೇರಿ ಪಟ್ಟಣದಲ್ಲಿ ಭಾನುವಾರ ಸಂಜೆ ಅಂಗಡಿ, ಹೊಟೇಲುಗಳಲ್ಲಿ ಪೂಜೆ ನಡೆದು, ಸೋಮವಾರ ಬೆಳಿಗ್ಗೆಯೂ ಕೆಲವೆಡೆ ಪೂಜೆ ನಡೆಯಿತು. ಮನೆಗಳ ಮುಂದೆ ಸಾಲು ಸಾಲು ಹಣತೆಗಳನ್ನು ಬೆಳಗಿಸಿ ದೀಪಾವಳಿ ಕಳೆಗಟ್ಟಿಸುವಂತೆ ಮಾಡಿದೆ.
ಮಂಗಳವಾರ ಕಿಗ್ಗಾ ಹೋಬಳಿ ವ್ಯಾಪ್ತಿ ಪ್ರದೇಶಗಳಲ್ಲಿ ಬಲಿಪಾಡ್ಯಮಿ, ಗೋಪೂಜೆ, ಲಕ್ಷ್ಮಿಮಿ ಪೂಜೆ, ಹಬ್ಬದ ಸಂಭ್ರಮ ನಡೆಯಲಿದೆ.ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಆದೇಶದಂತೆ ಬೆಳಿಗ್ಗೆ ಗೋಪೂಜೆ ನಡೆಯಲಿದೆ.