ಕನ್ನಡಪ್ರಭ ವಾರ್ತೆ ಹಾವೇರಿ
ದೀಪಾವಳಿ ಹಬ್ಬವನ್ನು ಜಿಲ್ಲಾದ್ಯಂತ ಜನತೆ ಸಂಭ್ರಮದಿಂದ ಆಚರಿಸುತ್ತಿದ್ದು, ಹಬ್ಬದ ಪೂಜೆಗಾಗಿ ವಿವಿಧ ಪೂಜಾ ಸಾಮಗ್ರಿ ಖರೀದಿ ಜೋರಾಗಿದೆ. ಬೆಳಕಿನ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ.ಭಾನುವಾರದಿಂದಲೇ ದೀಪಾವಳಿ ಹಬ್ಬ ಶುರುವಾಗಿದ್ದು, ನರಕ ಚತುರ್ದಶಿಯನ್ನು ಮನೆಮಂದಿಯೆಲ್ಲ ಎಣ್ಣೆ ಸ್ನಾನ ಮಾಡಿ ಸಂಭ್ರಮಿಸಿದರು. ಸೋಮವಾರ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಭರದ ಸಿದ್ಧತೆ ನಡೆದಿದೆ. ಮಂಗಳವಾರ ಪಾಡ್ಯ ಸೇರಿದಂತೆ ಮೂರು ದಿನಗಳ ಹಬ್ಬ ಆಚರಣೆಗಾಗಿ ಜನ ಸಿದ್ಧತೆ ನಡೆಸಿದ್ದಾರೆ. ಹೂವು, ಹಣ್ಣು, ದಿನಸಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಇದರಿಂದ ಮಾರುಕಟ್ಟೆ ಗಿಜಿಗುಡುತ್ತಿದ್ದವು.
ಹಬ್ಬಕ್ಕೆ ಮೆರಗು ನೀಡಲು ಬಗೆಬಗೆಯ ಆಕಾರದ ಹಣತೆಗಳು, ಆಕಾಶ ಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಖರೀದಿ ಜೋರಾಗಿತ್ತು. ಮಾರುಕಟ್ಟೆಯಲ್ಲಿ ಬಣ್ಣ, ಬಣ್ಣದ ವಿಶಿಷ್ಟ ಆಕಾರದ ಆಕಾಶಬುಟ್ಟಿಗಳ ಸಾಲುಗಳು ಪ್ರಮುಖ ಆಕರ್ಷಣೆಯಾಗಿವೆ. ವೈವಿಧ್ಯಮಯ ಆಕಾಶಬುಟ್ಟಿಗಳನ್ನು ಖರೀದಿಸುವ ಭರಾಟೆ ಜೋರಾಗಿ ಸಾಗಿದೆ.ಹಬ್ಬದ ಖುಷಿಗಾಗಿ ಮನೆ ಮಂದಿಗೆಲ್ಲ ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದೆ. ಅಲ್ಲದೇ ಜಾನುವಾರುಗಳಿಗೆ ಅಲಂಕಾರದ ಸಾಮಗ್ರಿಗಳನ್ನು ಖರೀದಿ ಮಾಡಲಾಗುತ್ತಿದೆ. ಮೂಗುದಾರ, ಝೂಲ, ಕೊಂಬೆಣಸು, ಹಗ್ಗ, ಹಣೆಕಟ್ಟು, ಗೆಜ್ಜೆಸರ, ಕೊಂಬಿಗೆ ಹಚ್ಚಲು ಬಗೆಬಗೆಯ ಬಣ್ಣ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ.
ಬರದಲ್ಲಿ ಬೆಲೆ ಏರಿಕೆ:ದೀಪಾವಳಿ ಹಬ್ಬದ ಹಿನ್ನೆಲೆ ಗ್ರಾಮೀಣ ಭಾಗದ ಜನರು ವಿವಿಧ ಸಾಮಗ್ರಿ, ಹೂವು, ಹಣ್ಣು ಖರೀದಿಗೆ ಆಗಮಿಸಿದ್ದರಿಂದ ನಗರದ ಮಾರುಕಟ್ಟೆ ಜನಜಂಗುಳಿಯಿಂದ ತುಂಬಿತ್ತು. ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದ್ದು ಗ್ರಾಹಕರಿಗೆ ಬಿಸಿಮುಟ್ಟಿಸಿದೆ.ಸೇಬುಹಣ್ಣು ೧ ಕೆಜಿಗೆ ₹೧೨೦-೧೫೦, ದ್ರಾಕ್ಷಿ ಕೆಜಿಗೆ ₹೨೦೦, ದಾಳಿಂಬೆ ಕೆಜಿಗೆ₹೧೫೦, ಮೋಸಂಬಿ ಕೆಜಿಗೆ ₹೭೦-೮೦, ಕಿತ್ತಲೆ ಕೆಜಿಗೆ ₹೬೦-೮೦, ಬಾಳೆಹಣ್ಣು ಒಂದು ಡಜನ್‌ಗೆ ₹೪೦-೫೦ಗೆ ಮಾರಾಟವಾಗುತ್ತಿದ್ದವು. ಇನ್ನು ಹೂವಿನ ದರ ಗಗನಮುಖಿಯಾಗಿದ್ದು ಗುಲಾಬಿ, ಸೇವಂತಿ, ಕಾಕಡ, ಮಲ್ಲಿಗೆ, ಕನಕಾಂಬರ, ದುಂಡು ಸೇವಂತಿ ಸೇರಿದಂತೆ ಹಲವು ಹೂಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಎರಡು, ಮೂರು ಪಟ್ಟು ಹೆಚ್ಚಳವಾಗಿದೆ.ಪೆಟೆಲ್ಸ್ ಗುಲಾಬಿ ಕೆಜಿಗೆ ₹೨೫೦-೩೦೦, ಸೇವಂತಿಗೆ ಕೆಜಿಗೆ ₹೨೦೦, ಚಂಡು ಹೂ ಕೆಜಿಗೆ ₹೩೦-೪೦, ಗುಲಾಬಿ ಒಂದು ಕಟ್ಟಿಗೆ ₹೧೫೦-೨೦೦, ಕಾಕಡಾ ಮಲ್ಲಿಗೆ ಒಂದು ಮಾರಿಗೆ ₹೮೦, ಕನಕಾಂಬರ ಒಂದು ಮಾರಿಗೆ ₹೧೨೦, ಸೇವಂತಿಗೆ ಒಂದು ಮಾರಿಗೆ ₹೭೦-೮೦, ಚಂಡು ಹೂ ಒಂದು ಮಾರಿಗೆ ₹೩೦ ಹಾಗೂ ಸುಗಂಧಿ ಮಾಲೆ ಗಾತ್ರಕ್ಕೆ ಅನುಗುಣವಾಗಿ ₹೩೦-೨೫೦ರಂತೆ ಮಾರಾಟವಾಗುತ್ತಿದ್ದವು. ಒಂದು ಜೊತೆಗೆ ಬಾಳೆ ಕಂಬಕ್ಕೆ ₹೩೦-೪೦ವರೆಗೆ ಮಾರಾಟ ಮಾಡಲಾಯಿತು. ಅಗಂಡಿ, ವಾಹನಗಳ ಪೂಜೆಗೆ ಹೂವಿನ ಅವಶ್ಯಕತೆ ಇರುವುದರಿಂದ ಸಹಜವಾಗಿ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ದುಪ್ಪಟ್ಟಾಗಿದೆ. ಗ್ರಾಹಕರು ವಿಧಿ ಇಲ್ಲದೇ ಚೌಕಾಸಿ ಮಾಡಿ ಅಗತ್ಯಕ್ಕೆ ತಕ್ಕಂತೆ ಹೂಗಳನ್ನು ಖರೀದಿಸುತ್ತಿದ್ದರು.
ಪಟಾಕಿ ಖರೀದಿಗೆ ನಿರಾಸಕ್ತಿ:ಪಟಾಕಿ ದರ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕವಾಗಿದೆ. ಈ ಹಿಂದೆ ಸಾವಿರಾರು ರು. ಪಟಾಕಿ ಖರೀದಿ ಮಾಡುತ್ತಿದ್ದ ವ್ಯಕ್ತಿ ಐದು ನೂರು ರು. ಪಟಾಕಿ ಖರೀದಿ ಮಾಡುತ್ತಿದ್ದಾನೆ. ಹಲವರು ಪಟಾಕಿ ಖರೀದಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಸಾಂಪ್ರದಾಯಿಕವಾಗಿ ಪಟಾಕಿ ಹೊಡೆಯಬೇಕು ಎನ್ನುವುದಕ್ಕೆ ಪಟಾಕಿ ಖರೀದಿ ಮಾಡಲಾಗುತ್ತಿದೆ. ಅಲ್ಲದೇ ಪಟಾಕಿ, ಇನ್ನಿತರ ಸಿಡಿಮದ್ದಿನ ದರ ದುಪ್ಪಟ್ಟಾಗಿದೆ. ಆದರೂ ಹಬ್ಬದ ಸಂಭ್ರಮಕ್ಕೆ ಪಾರವಿಲ್ಲವಾಗಿದೆ.ರಾಣಿಬೆನ್ನೂರು; ಬರದಲ್ಲಿಯೂ ದೀಪಾವಳಿ ಸಂಭ್ರಮಾಚರಣೆ:ಬರದ ಕರಿಛಾಯೆಯ ನಡುವೆಯು ಬೆಳಕಿನ ಹಬ್ಬ ದೀಪಾವಳಿಯನ್ನು ಈ ಬಾರಿ ತಾಲೂಕಿನ ಜನರು ಸಡಗರ ಸಂಭ್ರಮದಿAದ ಆಚರಿಸಲು ಸಜ್ಜಾಗುತ್ತಿದ್ದು, ಭಾನುವಾರ ನಗರದ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿತ್ತು.ಆಕಾಶಬುಟ್ಟಿ, ಮಣ್ಣಿನ ಹಣತೆ, ಪೂಜೆಗಾಗಿ ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳು, ಬಟ್ಟೆ ಅಂಗಡಿಗಳು, ಕಿರಾಣಿ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿಯಿತ್ತು.ಕಾಶ್ಮೀರಿ ಸೇಬು ₹140 ಕೆಜಿ, ಹಿಮಾಚಲ ಪ್ರದೇಶ ಸೇಬು ₹120 ಕೆಜಿ, ಮೊಸಂಬಿ ₹110 ಕೆಜಿ, ದಾಳಿಂಬೆ ₹ 90, ಚಿಕ್ಕು ₹45 ಮತ್ತು ಸೇವಂತಿ ಮಾಲೆ ₹40ರಿಂದ 60, ಮಲ್ಲಿಗೆ ಹಾಗೂ ಕನಕಾಂಬರಿ ₹50, ಬಿಡಿ ಹೂವು 50 ಗ್ರಾಂಗೆ ₹20 ದರದಲ್ಲಿ ಮಾರಾಟವಾದವು.
ಸಂಚಾರ ದಟ್ಟನೆ ಹೆಚ್ಚಳ:ಹಬ್ಬದ ಖರೀದಿ ಹಿನ್ನೆಲೆ ನಗರದ ಎಂಜಿ ರಸ್ತೆಯಲ್ಲಿ ಸಂಚಾರ ದಟ್ಟನೆ ಅಧಿಕವಾಗಿತ್ತು. ಇದರಿಂದ ಜನರು ಹಬ್ಬಕ್ಕೆ ಬೇಕಾದ ಪೂಜಾ ವಸ್ತುಗಳನ್ನು ಖರೀದಿಸಲು ಪ್ರಯಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರಿಗೆ ಸಂಚಾರ ದಟ್ಟನೆ ನಿಯಂತ್ರಿಸುವುದು ಸವಾಲಾಗಿತ್ತು.