ದೀಪಾವಳಿ ಪೂಜಾ ಮಹೋತ್ಸವ: ಮಹದೇಶ್ವರಸ್ವಾಮಿ ದೇಗುಲಕ್ಕೆ ಭಕ್ತರ ದಂಡು

KannadaprabhaNewsNetwork |  
Published : Nov 10, 2026, 12:45 AM IST
9ಕೆಎಂಎನ್ ಡಿ12 | Kannada Prabha

ಸಾರಾಂಶ

ಮಂಗಳವಾದ್ಯದೊಂದಿಗೆ ಹಾಲರವಿವೊತ್ತ ಹೆಣ್ಣುಮಕ್ಕಳು, ಮಾದಪ್ಪನ ಗುಡ್ಡಪ್ಪ, ನೀಲಗಾರರು ‘ಉಘೇ ಮಾದಪ್ಪ ಉಘೇ’ ಎಂಬ ಜಯಘೋಷಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ದೇವಾಲಯವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ, ತಂದ ಪವಿತ್ರ ಹಾಲರವಿ ಜಲದಿಂದ ಗರ್ಭಗುಡಿಯಲ್ಲಿ ಮಾದಪ್ಪನಿಗೆ ವಿಶೇಷ ಮಜ್ಜನ (ಅಭಿಷೇಕ) ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ದೀಪಾವಳಿ ಪೂಜಾ ಮಹೋತ್ಸವದ ಅಂಗವಾಗಿ ಪಟ್ಟಣದ ದೊಡ್ಡಕೆರೆ ಸಮೀಪವಿರುವ ಮಲೆಮಹದೇಶ್ವರ ದೇವಸ್ಥಾನ ಹಾಗೂ ತಾಲೂಕಿನ ದುಗ್ಗನಹಳ್ಳಿ ಮಹದೇಶ್ವರಸ್ವಾಮಿ ದೇಗುಲದಲ್ಲಿ ಹಾಲರವಿ ಉತ್ಸವ ಹಾಗೂ ಎಣ್ಣೆಮಜ್ಜನ ಸೇವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಪ್ರದಾನವಾಗಿ ಜರುಗಿತು.

ತಾಲೂಕಿನ ತಮ್ಮಡಹಳ್ಳಿ ಬಳಿ ಇರುವ ಹಾಲು ಹಳ್ಳದಲ್ಲಿ ನೀರು ತುಂಬಿದ ಕಳಸ, ಮಹದೇಶ್ವರ ಬಸವಪ್ಪ, ಮಂಟೇಸ್ವಾಮಿ, ಸಿದ್ದಪ್ಪಾಜಿ ಕಂಡಾಯ, ಕರಿಯಣ್ಣ ಕೆಂಚಣ್ಣ ದೇವರು ಸೇರಿದಂತೆ ಇತರೆ ದೇವತೆಗಳ ಹೂವು ಹೊಂಬಾಳೆ ಕಾರ್ಯಕ್ರಮವು ಶ್ರದ್ಧಾಪೂರ್ವಕವಾಗಿ ನಡೆಯಿತು.

ಮಂಗಳವಾದ್ಯದೊಂದಿಗೆ ಹಾಲರವಿವೊತ್ತ ಹೆಣ್ಣುಮಕ್ಕಳು, ಮಾದಪ್ಪನ ಗುಡ್ಡಪ್ಪ, ನೀಲಗಾರರು ‘ಉಘೇ ಮಾದಪ್ಪ ಉಘೇ’ ಎಂಬ ಜಯಘೋಷಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ದೇವಾಲಯವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ, ತಂದ ಪವಿತ್ರ ಹಾಲರವಿ ಜಲದಿಂದ ಗರ್ಭಗುಡಿಯಲ್ಲಿ ಮಾದಪ್ಪನಿಗೆ ವಿಶೇಷ ಮಜ್ಜನ (ಅಭಿಷೇಕ) ನೆರವೇರಿಸಲಾಯಿತು.

ದಾರಿ ಉದ್ದಕ್ಕೂ ಮಾದಪ್ಪನ ಕಾವ್ಯಗಳನ್ನು ಹಾಡುತ್ತಾ ಒಂದೊಂದು ಹೆಜ್ಜೆಯಂತೆ ಬಸವಪ್ಪ ಹಾಗೂ ಕರಗವೊತ್ತ ಅರ್ಚಕರನ್ನು ಬರಮಾಡಿಕೊಳ್ಳುತ್ತಿರುವುದು ಮಾದಪ್ಪನ ಭಕ್ತಿಗೆ ಸಾಕ್ಷಿಯಾಯಿತು.

ಸೋಮವಾರ ರಾತ್ರಿ ಮಾದಪ್ಪನ ಶಿವಲಿಂಗಕ್ಕೆ ಹೆಣ್ಣೆ ಮಜ್ಜನ ಅಭಿಷೇಕ ನಡೆಯಿತು. ದೀಪಾವಳಿ ಕಾರ್ತಿಕ ಮಾಸದ ಅಂಗವಾಗಿ ದೇವರಿಗೆ ಎಳನೀರು, ಜೇನುತುಪ್ಪ, ಹಾಲು, ಮೊಸಲು, ತುಪ್ಪ ಸೇರಿದಂತೆ ಇತರೆ ಅಭಿಷೇಕಗಳನ್ನು ನೆರೆವೇರಿಸಲಾಯಿತು. ಹರಕೆವೊತ್ತ ಭಕ್ತರು ಬಾಯಿ ಬೀಯ ಹರಕೆ ತೀರಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಹುಲಿವಾಹನೋತ್ಸವ, ಪಂಜಿನ ಮೆರವಣಿಗೆ:

ತಾಲೂಕಿನ ದುಗ್ಗನಹಳ್ಳಿಯಲ್ಲಿ ನ.10 ರಂದು ಮಹದೇಶ್ವರಸ್ವಾಮಿಯ ಹುಲಿವಾಹನೋತ್ಸವ, ಅನ್ನಸಂತರ್ಪಣೆ, ಕುರಿ ದನಗಳ ಪಂಜಿನ ಮೆರವಣಿಗೆ, ಭಕ್ತಿಗೀತೆ ಹಾಗೂ ಹರಿಕಥೆ ಕಾರ್ಯಕ್ರಗಳು ಜರುಗಲಿವೆ. ನ.11ರಂದು ಮುದ್ದೇಗೌಡನದೊಡ್ಡಿ ಗ್ರಾಮಸ್ಥರಿಂದ ರಥೋತ್ಸವ, ದುಗ್ಗನಹಳ್ಳಿ, ಹಂಚಿಪುರ, ಮುದ್ದೇಗೌಡನದೊಡ್ಡಿಯವರಿಂದ ಪಂಜಿನ ಮೆರವಣಿಗೆ ಹಾಗೂ ಸಂಜೆ 5 ಗಂಟೆಗೆ ತೆಪ್ಪೋತ್ಸವ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ