27 ಜಿಲ್ಲೆಗಳ ಕೈ ಶಾಸಕರ ಜತೆ ಡಿಕೆ 7 ತಾಸು ಸಭೆ

KannadaprabhaNewsNetwork |  
Published : Aug 26, 2026, 02:00 AM IST
ಸಿಎಂ ಸಭೆ. | Kannada Prabha

ಸಾರಾಂಶ

‘ಶಾಸಕರು ಐಎಎಸ್‌, ಐಪಿಎಸ್‌ ಅಧಿಕಾರಿಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ. ಉಳಿದ ಅಧಿಕಾರಿಗಳ ವರ್ಗಾವಣೆಯಲ್ಲಿ ಜಾತಿವಾದ ಮಾಡದೆ ಸಾಮಾಜಿಕ ನ್ಯಾಯ ಪಾಲಿಸಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

‘ಶಾಸಕರು ಐಎಎಸ್‌, ಐಪಿಎಸ್‌ ಅಧಿಕಾರಿಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ. ಉಳಿದ ಅಧಿಕಾರಿಗಳ ವರ್ಗಾವಣೆಯಲ್ಲಿ ಜಾತಿವಾದ ಮಾಡದೆ ಸಾಮಾಜಿಕ ನ್ಯಾಯ ಪಾಲಿಸಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.

ಅಲ್ಲದೆ, ಭಾರತ್ ಜೋಡೋ ಯುವಸಂಘ ಸ್ಥಾಪನೆ ಹಾಗೂ ಅಧ್ಯಕ್ಷರ ನೇಮಕಕ್ಕೆ ಆದ್ಯತೆ ನೀಡಬೇಕು. ಪಂಚಾಯಿತಿ ಮಟ್ಟದ ಗ್ಯಾರಂಟಿ ಸಮಿತಿಗಳಿಗೆ ಆರು ಸದಸ್ಯರ ನೇಮಕಕ್ಕೂ ಪ್ರಾಧಾನ್ಯತೆ ನೀಡಬೇಕು. ಒಟ್ಟಾರೆ ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಸತತ ಏಳು ಗಂಟೆಗಳ ಕಾಲ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ 27 ಜಿಲ್ಲೆಗಳ ಶಾಸಕರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಆದ್ಯತೆಯ ವಿಷಯಗಳ ಕುರಿತು ಮಾಹಿತಿ ಪಡೆದರು. ತಮ್ಮ ಕ್ಷೇತ್ರದ ಕುಡಿಯುವ ನೀರು, ಮೂಲಸೌಲಭ್ಯ, ವಸತಿ, ನೀರಾವರಿ ಮತ್ತಿತರ ಅಭಿವೃದ್ಧಿ ಯೋಜನೆಗಳ ಕುರಿತು ಶಾಸಕರು ಸಭೆಯಲ್ಲಿ ಚರ್ಚಿಸಿದರು.

ಈ ವೇಳೆ ಶಿವಕುಮಾರ್‌, ನಿಮ್ಮ ಭಾವನೆಗಳನ್ನು ಅರಿತು ಸರ್ಕಾರದ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಒದಗಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ವರ್ಗಾವಣೆಯಲ್ಲಿ ಜಾತಿ ಬೇಡ:

ವರ್ಗಾವಣೆ ವಿಚಾರದಲ್ಲಿ ಜಾತಿ ಮಾಡಬೇಡಿ ಎಂದು ಕಾಂಗ್ರೆಸ್‌ ವರಿಷ್ಠರು ಸೂಚನೆ ನೀಡಿದ್ದಾರೆ. ಹೀಗಾಗಿ ವರ್ಗಾವಣೆ ವಿಚಾರದಲ್ಲಿ ಸಾಮಾಜಿಕ ನ್ಯಾಯ ಪಾಲಿಸಬೇಕು. ಯಾವುದೇ ಕಾರಣಕ್ಕೂ ಜಾತಿ ಮಾಡಬಾರದು. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಶಿವಕುಮಾರ್‌ ಸಲಹೆ ನೀಡಿದರು.

ಭಾರತ್ ಜೋಡೋ ಯುವ ಸಂಘ:

ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಯುವ ಸಂಘಗಳ ರಚನೆಗೆ ಹಾಗೂ ಅವುಗಳ ಸಕ್ರಿಯ ಕಾರ್ಯನಿರ್ವಹಣೆಗೆ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಸೂಕ್ತ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಸೂಚಿಸಬೇಕು. ಇದು ನನ್ನ ಹಲವಾರು ವರ್ಷಗಳ ಅಧ್ಯಯನದ ಫಲ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಎಲ್ಲ ಶಾಸಕರು ಸಹಕರಿಸುವಂತೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ಇದರೊಂದಿಗೆ ಪಂಚಾಯಿತಿ ಮಟ್ಟದ ಗ್ಯಾರಂಟಿ ಸಮಿತಿಗಳಿಗೆ ಆರು ಸದಸ್ಯರ ನೇಮಕ ಮಾಡುವ ಬಗ್ಗೆ ಶಾಸಕರಿಗೆ ಸಲಹೆ ನೀಡಿದರು. ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡುವಂತೆ ಶಾಸಕರಿಗೆ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಪಕ್ಷದ ಕಚೇರಿ ನಿರ್ಮಿಸಲು ಪ್ರಾರಂಭಿಸುವಂತೆ ಸೂಚಿಸಿದರು.

ಎಸ್ಐಆರ್‌ ಬಗ್ಗೆ ಎಚ್ಚರವಹಿಸಿ:

ಪ್ರಸ್ತುತ ಎಸ್‌ಐಆರ್‌ನಲ್ಲಿ 1.08 ಕೋಟಿ ಮಂದಿ ಮತ ಹಕ್ಕಿನಿಂದ ಹೊರಗುಳಿದಿದ್ದಾರೆ. ಹೀಗಾಗಿ ಹೊಸದಾಗಿ ಮತ ಸೇರ್ಪಡೆ ವೇಳೆ ಹಾಗೂ ಆಕ್ಷೇಪಣೆ ಸಲ್ಲಿಸುವ ವೇಳೆ ಸಂಬಂಧಪಟ್ಟ ಮತದಾರರಿಗೆ ಶಾಸಕರು ನೆರವಾಗಬೇಕು. ಇದಕ್ಕೆ ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ಮೂಲಕ ಸಹಕಾರ ನೀಡಬೇಕು ಎಂದು ಶಿವಕುಮಾರ್‌ ಸಲಹೆ ನೀಡಿದರು ಎಂದು ತಿಳಿದುಬಂದಿದೆ.ಇಂದು ಬೆಂಗಳೂರು ಶಾಸಕರ ಸಭೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ಶಾಸಕರೊಂದಿಗೆ ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಭೆ ನಡೆಸಲಿದ್ದಾರೆ. ಜತೆಗೆ ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ಕೂಡ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು, ಕರಾವಳಿಯಲ್ಲಿ ಭರ್ಜರಿ ಮಳೆ
ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್​