ರಾಜ್ಯ ಸರ್ಕಾರ ವಿರುದ್ಧ ದ.ಕ., ಉಡುಪಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jun 25, 2025, 01:18 AM IST
ಪ್ರತಿಭಟನೆಯಲ್ಲಿ ಮಾತನಾಡುತ್ತಿರುವ ಶಾಸಕ ವೇದವ್ಯಾಸ ಕಾಮತ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದ.ಕ., ಉಡುಪಿ ಜಿಲ್ಲೆಗಳ ಜನರ ಸಮಸ್ಯೆಗಳ ಕುರಿತು ನಿರ್ಲಕ್ಷ್ಯ ಹಾಗೂ ಯೋಜನೆಗಳ ವಿಳಂಬ ಆರೋಪಿಸಿ ಬಿಜೆಪಿ ವತಿಯಿಂದ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಎಲ್ಲ ಸ್ಥಳೀಯ ಸಂಸ್ಥೆಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದ.ಕ., ಉಡುಪಿ ಜಿಲ್ಲೆಗಳ ಜನರ ಸಮಸ್ಯೆಗಳ ಕುರಿತು ನಿರ್ಲಕ್ಷ್ಯ ಹಾಗೂ ಯೋಜನೆಗಳ ವಿಳಂಬ ಆರೋಪಿಸಿ ಬಿಜೆಪಿ ವತಿಯಿಂದ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಎಲ್ಲ ಸ್ಥಳೀಯ ಸಂಸ್ಥೆಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲೂ ಪ್ರತಿಭಟನೆ ಆಯೋಜಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್‌, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿರಂತರ ಬೆಲೆಯೇರಿಕೆ, ಭ್ರಷ್ಟಾಚಾರ, ಅಭಿವೃದ್ಧಿರಹಿತ ಆಡಳಿತದಿಂದ ಜನತೆ ಕಂಗೆಟ್ಟಿದ್ದಾರೆ ಎಂದರು.ರಾಜ್ಯ ಸರ್ಕಾರದಿಂದ ಆಗುತ್ತಿರುವ ತೊಂದರೆಗಳನ್ನು ಸಾರ್ವಜನಿಕರು ಜನಪ್ರತಿನಿಧಿಗಳ ಬಳಿ ಹೇಳುತ್ತಿದ್ದಾರೆ. ನೂರಾರು ಸಮಸ್ಯೆಗಳನ್ನು ಜನರು ನಮ್ಮ ಗಮನಕ್ಕೆ ತಂದಿದ್ದಾರೆ. ಈ ಪೈಕಿ 25 ನಿರ್ದಿಷ್ಟ ವಿಷಯಗಳನ್ನು ಪಟ್ಟಿ ಮಾಡಿದ್ದೇವೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅವಧಿ ಮುಗಿದ ಬಳಿಕ ಆಡಳಿತ ರಾಜ್ಯ ಸರ್ಕಾರದ ಕೈಯಲ್ಲಿದೆ. ಕಳೆದ ಮೂರು ತಿಂಗಳಿನಿಂದ ಮನಪಾದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಸಭೆಯನ್ನು ಉಸ್ತುವಾರಿ ಸಚಿವರು ನಡೆಸಿಲ್ಲ. ಈಗ ನಗರದಲ್ಲಿ ಕೃತಕ ಪ್ರವಾಹಕ್ಕೆ ಬಿಜೆಪಿ ಕಾರಣ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಯಾವುದೇ ಹೊಸ ರೇಶನ್‌ ಕಾರ್ಡ್‌ಗೆ ಅರ್ಜಿ ಸ್ವೀಕರಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಸಾವಿರ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲು ಹೊರಟಿದೆ. ಮುಡಾ ಅಧ್ಯಕ್ಷರ ಅಧಿಕಾರ ಕಸಿದುಕೊಳ್ಳಲಾಗಿದೆ. ಮುಡಾಕ್ಕೆ ಸಲ್ಲಿಸಿದ ಅರ್ಜಿಗಳು ಬೆಂಗಳೂರಿನಲ್ಲಿ ಇತ್ಯರ್ಥವಾಗುತ್ತಿವೆ. ಕೃಷಿ ಭೂಮಿ ನೋಂದಣಿ ಆಗುತ್ತಿಲ್ಲ. ಆಶಾ ಕಾರ್ಯಕರ್ತರ ವೇತನ ಹೆಚ್ಚಳ ಮಾಡಿಲ್ಲ. ವಿದ್ಯುತ್‌ ದರ ಏರಿಕೆ ಮಾಡಲಾಗಿದೆ. ಬಿಜೆಪಿ ಅವಧಿಯಲ್ಲಿ ಶಿಲಾನ್ಯಾಸ ನಡೆಸಿ, ಅನುದಾನ ಮೀಸಲಿಟ್ಟು ಪೂರ್ಣಗೊಂಡ ಕಾಮಗಾರಿಗಳನ್ನು ಕಾಂಗ್ರೆಸ್‌ನವರು ಉದ್ಘಾಟಿಸುತ್ತಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ್‌ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸಂಗ್ರಹಿಸಿದ ತೆರಿಗೆಗೆ ಅನುಗುಣವಾಗಿ ದ.ಕ. ಜಿಲ್ಲೆಗೆ, ಶಾಸಕರಿಗೆ ಅನುದಾನ ನೀಡಿಲ್ಲ ಎಂದರು.

ಜಿಲ್ಲೆಯಲ್ಲಿ ಯಾವುದೇ ಯೋಜನೆಗೆ ಶಿಲಾನ್ಯಾಸ ಆಗುತ್ತಿಲ್ಲ. ಬಿಜೆಪಿ ಸರ್ಕಾರ ನಡೆಸಿದ ಕಾಮಗಾರಿ ಉದ್ಘಾಟನೆ ಮಾತ್ರ ಆಗುತ್ತಿದೆ. ಜಿಲ್ಲೆಯಲ್ಲಿ 43 ಸಾವಿರ ಸಂಧ್ಯಾ ಸುರಕ್ಷಾ ಯೋಜನೆ ರದ್ದು ಮಾಡಲು ನೋಟಿಸ್‌ ನೀಡಲಾಗಿದೆ. ಅಕ್ರಮ ಸಕ್ರಮ ಅರ್ಜಿ ಒಂದು ಲಕ್ಷಕ್ಕೂ ಮಿಕ್ಕಿ ವಿಲೇವಾರಿಗೆ ಬಾಕಿ ಇದೆ. ಜಿಲ್ಲೆಯಲ್ಲಿ 140ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ ನಿಲ್ಲಿಸಿದ್ದಾರೆ. ಮರಳು, ಕೆಂಪುಕಲ್ಲು ಕೊರತೆ ಆಗಿದೆ. ಮುಡಾದಲ್ಲಿ ಕಾಂಗ್ರೆಸ್‌ನ ಬ್ರೋಕರ್‌ಗಳೇ ತುಂಬಿ ಹೋಗಿದ್ದಾರೆ. ಕಾಂಗ್ರೆಸ್‌ ಸರ್ಕಾರದಿಂದ ಜನರು ಕಂಗಾಲಾಗಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಮುಖಂಡ ವಿಕಾಸ್‌ ಪುತ್ತೂರು ಮಾತನಾಡಿದರು. ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ, ಮಂಡಲ ಅಧ್ಯಕ್ಷ ರಮೇಶ್‌ ಕಂಡೆಟ್ಟು, ಪ್ರಮುಖರಾದ ವಕೀಲ ಸುಧಾಕರ ಜೋಶಿ, ನಿತಿನ್‌ಕುಮಾರ್‌, ರವಿಶಂಕರ ಮಿಜಾರ್‌, ರಾಜಗೋಪಾಲ ರೈ, ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಸುಧೀರ್‌ ಶೆಟ್ಟಿ ಕಣ್ಣೂರು, ಪ್ರವೀಣ್‌ ಕುಮಾರ್‌ ಇದ್ದರು.

............................ಎರಡು ಜಿಲ್ಲೆಯಲ್ಲಿ 40 ಸಾವಿರ ಜನರಿಂದ ಪ್ರತಿಭಟನೆಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 399 ಗ್ರಾಪಂಗಳಲ್ಲಿ ಸೋಮವಾರ ಕಾಂಗ್ರೆಸ್ ಸರ್ಕಾರದ ದುರಾಡಳಿತ ವಿರುದ್ಧ ಧ ದೊಡ್ಡ ಮಟ್ಟದ ಜನಾಕ್ರೋಶ ವ್ಯಕ್ತವಾಗಿದೆ. ಎರಡು ಜಿಲ್ಲೆಯಲ್ಲಿ 40 ಸಾವಿರಕ್ಕೂ ಹೆಚ್ಚು ಜನ ಸರ್ಕಾರದ ನೀತಿಯನ್ನು ಖಂಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಜನಸಾಮಾನ್ಯರ ಐದು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸಿದ್ದೇವೆ ಎಂದು ಶಾಸಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದ್ದಾರೆ.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ