ದ.ಕನ್ನಡ, ಉಡುಪಿಯಲ್ಲಿ ಕೋಮು ಹಿಂಸೆ ನಿಗ್ರಹ ಪಡೆ ಸ್ಥಾಪನೆ: ಪರಂ

KannadaprabhaNewsNetwork | Updated : May 04 2025, 06:46 AM IST

ಸಾರಾಂಶ

  ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೋಮು ದುಷ್ಕೃತ್ಯಗಳನ್ನು ಮಟ್ಟ ಹಾಕಲು ನಕ್ಸಲ್‌ ನಿಗ್ರಹ ಪಡೆಯ ರೀತಿಯಲ್ಲಿಯೇ ಪ್ರತ್ಯೇಕ ‘ಆ್ಯಂಟಿ ಕಮ್ಯುನಲ್‌ ಟಾಸ್ಕ್‌ ಫೋರ್ಸ್‌’  ರಚಿಸಲಾಗುವುದು.

ಮಂಗಳೂರು : ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೋಮು ದುಷ್ಕೃತ್ಯಗಳನ್ನು ಮಟ್ಟ ಹಾಕಲು ನಕ್ಸಲ್‌ ನಿಗ್ರಹ ಪಡೆಯ ರೀತಿಯಲ್ಲಿಯೇ ಪ್ರತ್ಯೇಕ ‘ಆ್ಯಂಟಿ ಕಮ್ಯುನಲ್‌ ಟಾಸ್ಕ್‌ ಫೋರ್ಸ್‌’ (ಕೋಮು ಹಿಂಸಾಚಾರ ನಿಗ್ರಹ ಕಾರ್ಯಪಡೆ) ರಚಿಸಲಾಗುವುದು. ಕೋಮು ಸಂಬಂಧಿ ಪ್ರಕರಣಗಳ ನಿಗ್ರಹಕ್ಕೆ ಈ ಟಾಸ್ಕ್‌ ಫೋರ್ಸ್‌ಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪ್ರಕಟಿಸಿದ್ದಾರೆ.

ಹಿಂದು ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇನ್ನೆರಡು ವಾರಗಳಲ್ಲಿ ಈ ಟಾಸ್ಕ್‌ಫೋರ್ಸ್‌ ಸ್ಥಾಪನೆ ಆಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಇದು ಕಾರ್ಯಾಚರಿಸಲಿದೆ. ಈ ಪಡೆಗೆ ನಕ್ಸಲ್‌ ನಿಗ್ರಹ ದಳದ ಪೊಲೀಸರೂ ಸೇರಿದಂತೆ ಪ್ರತ್ಯೇಕ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಐಜಿ ಶ್ರೇಣಿ ಹಾಗೂ ಅದಕ್ಕೂ ಮೇಲ್ಪಟ್ಟ ಅಧಿಕಾರಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಎರಡು ಜಿಲ್ಲೆಗಳಲ್ಲಿ ಎಲ್ಲೇ ಕೋಮು ದುಷ್ಕೃತ್ಯ ನಡೆದರೂ, ಕೃತ್ಯಗಳಲ್ಲಿ ಭಾಗಿಯಾದವರು ಮಾತ್ರವಲ್ಲದೆ, ಸಹಕಾರ ನೀಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಈ ಪಡೆಗೆ ಅಧಿಕಾರ ನೀಡಲಾಗುತ್ತದೆ ಎಂದು ಪರಮೇಶ್ವರ್‌ ತಿಳಿಸಿದರು.

ಕೋಮು ಸಂಬಂಧಿ ದುಷ್ಕೃತ್ಯಗಳಿಗೆ ಪ್ರಚೋದನಾಕಾರಿ ಭಾಷಣ, ಹೇಳಿಕೆಗಳು ಕೂಡ ಕಾರಣವಾಗುತ್ತವೆ. ಹಾಗಾಗಿ, ಯಾರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೋ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಂಥವರು ಯಾರೇ ಆಗಿರಲಿ, ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಕೆಲ ವರ್ಷಗಳ ಕಾಲ ಕರಾವಳಿಯಲ್ಲಿ ಕೋಮು ಸಾಮರಸ್ಯಕ್ಕೆ ತೊಂದರೆಯಾಗುವ ಘಟನೆಗಳು ನಡೆದಿರಲಿಲ್ಲ. ಇದೀಗ ಅಶ್ರಫ್‌ ಮತ್ತು ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣಗಳು ಕೋಮು ಸಾಮರಸ್ಯಕ್ಕೆ ಸವಾಲಾಗಿವೆ. ಇದರ ಹಿಂದೆ ಅನೇಕ ಶಕ್ತಿಗಳು ಅಡಗಿವೆ. ಅವುಗಳ ಹುಟ್ಟಡಗಿಸದೆ ಬಿಡಲ್ಲ ಎಂದು ಅವರು ಎಚ್ಚರಿಸಿದರು.

ಕರಾವಳಿ ಸದಾ ಕಾಲ ಶಾಂತಿಯುತವಾಗಿರಬೇಕು. ಇಲ್ಲಿ ಬಂಡವಾಳ ಹೂಡಿಕೆ ಆಗಬೇಕು. ಉದ್ಯೋಗ ಸೃಷ್ಟಿಯಾಗಬೇಕೆಂದು ರಾಜ್ಯ ಸರ್ಕಾರ ಪ್ರಯತ್ನಪಡುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಕನ್ನಡಕ್ಕೆ ಇಷ್ಟಪಟ್ಟು ಜನರು ಬರುತ್ತಿದ್ದರು. ಮತ್ತೆ ಅಂತಹ ನಾಡನ್ನು ಕಟ್ಟಬೇಕಿದೆ ಎಂದರು.

ರೌಡಿಶೀಟರ್‌ನನ್ನು ಹೀರೋ

ಮಾಡಿದ್ದಾರೆ: ಡಾ। ಪರಂ

ಕೊಲೆಯಾದ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ ಸೇರಿದಂತೆ 5 ಗಂಭೀರ ಕ್ರಿಮಿನಲ್‌ ಪ್ರಕರಣಗಳ ಆರೋಪಿಯಾಗಿದ್ದ. ಒಂದು ಪಕ್ಷಕ್ಕೆ ಸೇರಿದವರು (ಬಿಜೆಪಿ) ರೌಡಿಶೀಟರ್‌ ಒಬ್ಬನನ್ನು ಹೀರೋ ಮಾಡಿದ್ದಾರೆ. ಹಾಗೆ ಮಾಡುವಾಗ ಆತ ರೌಡಿಶೀಟರ್‌ ಎಂಬುದು ಅವರಿಗೆ ಗೊತ್ತಿರಬೇಕಿತ್ತು. ಆದರೆ, ನಾವು ಆ ತರಹ ಮಾಡಿಲ್ಲ ಎಂದು ಸಚಿವ ಪರಮೇಶ್ವರ್‌ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಸುಹಾಸ್‌ ಹತ್ಯೆ ಕೇಸಲ್ಲಿ8 ಆರೋಪಿಗಳ ಬಂಧನ 

ಸುಹಾಸ್‌ನಿಂದ ಹತ್ಯೆಯಾದ ಫಾಝಿಲ್‌ ಸೋದರನೂ ಸೆರೆ- ₹5 ಲಕ್ಷಕ್ಕೆ ಆದಿಲ್‌ ಸುಪಾರಿಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣವನ್ನು 48 ಗಂಟೆಯೊಳಗೆ ಭೇದಿಸಿರುವ ಮಂಗಳೂರು ನಗರ ಪೊಲೀಸರು, 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆ ಸುಹಾಸ್‌ ಶೆಟ್ಟಿ ಫಾಝಿಲ್‌ ಎಂಬಾತನನ್ನು ಕೊಲೆ ಮಾಡಿದ್ದ. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಫಾಝಿಲ್‌ ಸೋದರ ಆದಿಲ್‌ 5 ಲಕ್ಷ ರು. ಸುಪಾರಿ ನೀಡಿದ್ದ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಸಹಜ ಸ್ಥಿತಿಗೆ ಮಂಗಳೂರುಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಕೋಮು ಸಂಘರ್ಷಕ್ಕೆ ಗುರಿಯಾಗಿದ್ದ ಮಂಗಳೂರು ಸಹಜ ಸ್ಥಿತಿಗೆ ಮರಳಿದೆ. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು, ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳಿದೆ. ಬಸ್‌, ಇತರ ವಾಹನಗಳ ಸಂಚಾರ ಯಥಾಸ್ಥಿತಿಗೆ ಮರಳಿದೆ

Share this article