ಸಿಎಂ ಆಪ್ತರ ಜತೆ ಡಿಕೆಶಿ ಸೌಹಾರ್ದ ಮಾತುಕತೆ

KannadaprabhaNewsNetwork |  
Published : Dec 06, 2025, 02:15 AM IST
ಡಿಕೆಶಿ | Kannada Prabha

ಸಾರಾಂಶ

ಗುರುವಾರ ರಾತ್ರಿ ವಿವಾಹವೊಂದರಕ್ಕೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮುಖಾಮುಖಿಯಾಗಿದ್ದು, ಇಬ್ಬರೂ ಪ್ರತ್ಯೇಕ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗುರುವಾರ ರಾತ್ರಿ ವಿವಾಹವೊಂದರಕ್ಕೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮುಖಾಮುಖಿಯಾಗಿದ್ದು, ಇಬ್ಬರೂ ಪ್ರತ್ಯೇಕ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಭೇಟಿ ಕುರಿತು ಸುದ್ದಿಗಾರರೊಂದಿಗೆ ಶುಕ್ರವಾರ ಪ್ರತ್ಯೇಕವಾಗಿ ಮಾತನಾಡಿರುವ ಉಭಯ ನಾಯಕರು, ಮದುವೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಭೇಟಿಯಾಗಿದ್ದೇವೆ. ಇದು ಪೂರ್ವನಿಯೋಜಿತ ಭೇಟಿಯಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ ಸಹೋದ್ಯೋಗಿಯಾಗಿರುವ ಕಾರಣ ಮಾತುಕತೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಮಾತನಾಡಿ, ಸಚಿವ ಸತೀಶ್‌ ಜಾರಕಿಹೊಳಿ ಮತ್ತು ನಾವು ಸಹೋದ್ಯೋಗಿಗಳು. ನಾವು ಭೇಟಿ ಮಾಡಿದಾಗ ರಾಜ್ಯ ಮತ್ತು ಪಕ್ಷದ ವಿಚಾರ ಮಾತನಾಡಿದ್ದೇವೆ. ನಮ್ಮನ್ನು ವೈರಿಗಳಂತೆ ಏಕೆ ನೋಡುತ್ತೀರಿ? ನಾವು ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ಜತೆಗೆ ಇರುತ್ತೇವೆ. ಬೆಳಗ್ಗೆ ತಿಂಡಿಗೆ, ರಾತ್ರಿ ಊಟಕ್ಕೆ ಸೇರುತ್ತೇವೆ. ರಾಜಕೀಯದಲ್ಲಿ ಸ್ನೇಹ, ಬಾಂಧವ್ಯ, ನೆಂಟಸ್ತನ ಇದ್ದೇ ಇರುತ್ತದೆ ಎಂದರು.

ನಾನು ಮತ್ತು ಎಂ.ಬಿ.ಪಾಟೀಲ್‌ ಶುಕ್ರವಾರ ಸುಮಾರು ಒಂದು ಗಂಟೆ ಮಾತನಾಡಿದ್ದೇವೆ. ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವುದು, ಆಂಧ್ರಪ್ರದೇಶ ಮತ್ತು ತಮಿಳುನಾಡು ನಮಗೆ ಸ್ಪರ್ಧೆ ನೀಡುತ್ತಿರುವುದು, ತೆಲಂಗಾಣದಲ್ಲಿ ಸದ್ಯದಲ್ಲೇ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವ ಕುರಿತು ಚರ್ಚಿಸಿದ್ದೇವೆ. ರಾಜ್ಯದ ಪ್ರಗತಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ಆಪ್ತರ ಮನೆಯ ಮದುವೆಗೆ ತೆರಳಿದ್ದಾಗ ಶಿವಕುಮಾರ್‌ ಸಿಕ್ಕಿದ್ದರು. ಜತೆಗೆ ಊಟ ಮಾಡಿ ಕೆಲಹೊತ್ತು ಮಾತನಾಡಿದ್ದೇವೆ. ಅವರು ಮದುವೆಗೆ ಬರುವ ಮಾಹಿತಿ ನನಗೆ ಇರಲಿಲ್ಲ. ಈ ಭೇಟಿ ಆಕಸ್ಮಿಕವಷ್ಟೇ. ಪಕ್ಷದ ಅಧ್ಯಕ್ಷರಾಗಿರುವ ಕಾರಣ ಮಾತನಾಡಿದೆವು. ಅದನ್ನು ಬಿಟ್ಟು ಬೇರೇನೂ ಇಲ್ಲ ಎಂದರು.

ನೀವು ಕೆಪಿಸಿಸಿ ಅಧ್ಯಕ್ಷರಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂದರ್ಭ ಇನ್ನೂ ಬಂದಿಲ್ಲ. ಪಕ್ಷದ ಹಂತದಲ್ಲೂ ಆ ಚರ್ಚೆಯಿಲ್ಲ. ಆ ವಿಚಾರಗಳನ್ನು ಹೈಕಮಾಂಡ್‌ ನಾಯಕರು ನೋಡಿಕೊಳ್ಳುತ್ತಾರೆ. ಇನ್ನು ನಾಯಕತ್ವ ಬದಲಾವಣೆಗೆ ಸಂಬಂಧಿಸಿ ಶಿವಕುಮಾರ್‌ ಅವರಿಗೆ ಬೆಂಬಲ ನೀಡುವ, ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದರು.---

ಬಾಕ್ಸ್....

ಸದ್ಯಕ್ಕೆ ಕದನ ನಿಂತಿದೆ-ಜಾರಕಿಹೊಳಿ

ಮುಖ್ಯಮಂತ್ರಿ ಸ್ಥಾನದ ವಿಚಾರಕ್ಕೆ ಪೂರ್ಣ ವಿರಾಮ ಬಿದ್ದಿದ್ದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್‌ ಜಾರಕಿಹೊಳಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಂತರ ಆ ವಿಚಾರದ ಚರ್ಚೆಗೆ ತಾತ್ಕಾಲಿಕವೇ ಅಥವಾ ಪೂರ್ಣಪ್ರಮಾಣದ ವಿರಾಮ ಬಿದ್ದಿದೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ, ನಮ್ಮ ರೀತಿಯಲ್ಲಿ ಸದ್ಯಕ್ಕೆ ಕದನ ನಿಂತಿದೆ. ಇನ್ನು, ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಇದೇ ವೇಳೆ ವೇಣುಗೋಪಾಲ್‌ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರು ಘೋಷಣೆ ಕೂಗಿರುವುದು ಸರಿಯಲ್ಲ. ಹೈಕಮಾಂಡ್ ನಾಯಕರು ಎಲ್ಲವನ್ನೂ ಸರಿ ಮಾಡಲು ಪ್ರಯತ್ನಿಸುತ್ತಿರುವಾಗ ಈ ರೀತಿ ಆಗಬಾರದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಭಾಷೆ ಕಲಿಯಿರಿ, ಕನ್ನಡವನ್ನು ಪ್ರೀತಿಸಿ, ಬೆಳೆಸಿ
ರಾಟ್ ವೀಲರ್ ನಾಯಿ ದಾಳಿಗೆ ಮಹಿಳೆ ಬಲಿ