ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಹುಟ್ಟುಹಬ್ಬ ಮೇ 15ರಂದು ಮುಖ್ಯಮಂತ್ರಿ ಆಗುವುದು ಫಿಕ್ಸ್. ಇದೇ ನಾನು ಹೇಳುವ ಅಂತಿಮ ದಿನಾಂಕ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯೇ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಸಿಗುತ್ತದೆ ಎಂಬ ವಿಶ್ವಾಸವಿದೆ. ಅವರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ. ಡಿಕೆಶಿ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ನೋಡಬೇಕು ಅಂತ ಸಾಕಷ್ಟು ಸಚಿವರು, ಶಾಸಕರು, ಪಕ್ಷದ ಕಾರ್ಯಕರ್ತರು ಹಾಗೂ ಜನರ ಆಸೆಯಾಗಿದೆ. ಹೀಗಾಗಿ ಮೇ 15ರೊಳಗೆ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಸಿಗುತ್ತದೆ ಎನ್ನುವ ಅಭಿಲಾಷೆ ಇದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುವಂತೆ ವರಿಷ್ಠರಲ್ಲಿ ಮನವಿ ಮಾಡುವುದಾಗಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಹಾಗೆಯೇ ರಾಜಣ್ಣ ಅವರ ಅಭಿಪ್ರಾಯ ತಿಳಿಸಿದ್ದಾರೆ. ರಾಜಕಾರಣದಲ್ಲಿ ವಿಭಿನ್ನ ಅಭಿಪ್ರಾಯ ಇರುವುದು ಸಹಜ. ಬೇರೆಯವರ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ನಾಯಕರಿಗೆ ಈ ಅವಧಿಯಲ್ಲಿ ಅವಕಾಶ ಸಿಗಬೇಕು ಎಂದಷ್ಟೇ ಕೇಳುತ್ತಿದ್ದೇನೆ ಎಂದರು.ಯಾವ ಕ್ಷೇತ್ರದಲ್ಲಿ ಗುಂಪುಗಾರಿಕೆ ಇಲ್ಲ ಹೇಳಿ:
ಡಿ.ಕೆ.ಶಿವಕುಮಾರ್ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಚರ್ಚೆಗೆ ಬಂದಾಗಲೆಲ್ಲ ಪಕ್ಷದೊಳಗೆ ಗುಂಪುಗಾರಿಕೆ ಆರಂಭವಾಗುತ್ತದೆಯಲ್ಲ ಎಂಬ ಪ್ರಶ್ನೆಗೆ ಯಾವ ಕ್ಷೇತ್ರದಲ್ಲಿ ಗುಂಪುಗಾರಿಕೆ ಇಲ್ಲ. ಎಲ್ಲಾ ಕ್ಷೇತ್ರ, ಜಾತಿಗಳಲ್ಲಿ ಗುಂಪುಗಾರಿಕೆ ಇದೆ. ರಾಜಕೀಯವೂ ಗುಂಪುಗಾರಿಕೆಯಿಂದ ಹೊರತಾಗಿಲ್ಲ. ನಾವು ರಾಜಕಾರಣದಲ್ಲಿ ಒಂದು ಬದಲಾವಣೆ ಆಗಲಿ ಅಂತ ಬಯಸಿದ್ದೀವಿ ಅಷ್ಟೇ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.|ಎಚ್.ರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಎಂ.ಎಚ್.ರಂಜಿತ್, ಗೀತಾ ಪರಮಶಿವಯ್ಯ, ಲೋಕೇಶ್, ಮಾಜಿ ಸದಸ್ಯರಾದ ಶ್ರೀನಿವಾಸ್, ಮುಖಂಡರಾದ ರೇವಣ್ಣ, ಶಿವಗಂಗು, ಶಿವಲಿಂಗಯ್ಯ ಮತ್ತಿತರರು ಹಾಜರಿದ್ದರು.
ನಾನು ಶಾಸಕನಾಗಿ ಅಲ್ಲ, ಜನರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಶಾಸಕರನ್ನಾಗಿ ಮಾಡಿದ್ದಾರಲ್ಲ ಅದೇ ನನ್ನ ಅದೃಷ್ಟ. ಇದಕ್ಕಿಂತ ಬೇರೇನೂ ನನಗೆ ದೊಡ್ಡದಲ್ಲ. ನನ್ನ ಕ್ಷೇತ್ರದಲ್ಲಿ ನಾನೇ ಮುಖ್ಯಮಂತ್ರಿ, ನಾನೇ ಸಚಿವ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. ನನಗೆ ಜನರ ಪ್ರೀತಿ, ವಿಶ್ವಾಸವೇ ಸಾಕು ಬೇರೆ ಯಾವ ಸ್ಥಾನವೂ ಬೇಡ.
28ಕೆಆರ್ ಎಂಎನ್ 1.ಜೆಪಿಜಿ