ರಾಜ್ಯಕ್ಕೆ ಬರ ಆವರಿಸಿದ್ದರೆ ದಿಲ್ಲಿಯಲ್ಲಿ ಬೀಡುಬಿಟ್ಟ ಡಿಕೆಶಿ: ಅಶೋಕ್‌ ಕಿಡಿ

KannadaprabhaNewsNetwork |  
Published : Jul 30, 2026, 01:30 AM IST
29 ಆಲಮಟ್ಟಿ :1 | Kannada Prabha

ಸಾರಾಂಶ

ರಾಜ್ಯಾದ್ಯಂತ ತೀವ್ರ ಬರ ಆವರಿಸಿದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ 15 ದಿನಗಳಿಂದ ದೆಹಲಿಯಲ್ಲೇ ವಾಸ್ತವ್ಯ ಮಾಡಿದ್ದಾರೆ. ಸಿದ್ದರಾಮಯ್ಯಗೆ ಹೊರ ಹಾಕಿ ಸಿಎಂ ಆದವರಿಂದ ಏನೋ ಸಾಧನೆಯಾಗುತ್ತದೆ, ಯೋಜನೆ ಬರುತ್ತದೆಂದರೆ ಸಾಧನೆ ಮಾತ್ರ ಸೊನ್ನೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಸಿದ್ದರಾಮಯ್ಯಗೆ ಹೊರಹಾಕಿ ಸಿಎಂ ಆದವರ ಯೋಜನೆ, ಸಾಧನೆಗಳೇ ಶೂನ್ಯ: ಆರ್.ಅಶೋಕ ವಾಗ್ದಾಳಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಾದ್ಯಂತ ತೀವ್ರ ಬರ ಆವರಿಸಿದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ 15 ದಿನಗಳಿಂದ ದೆಹಲಿಯಲ್ಲೇ ವಾಸ್ತವ್ಯ ಮಾಡಿದ್ದಾರೆ. ಸಿದ್ದರಾಮಯ್ಯಗೆ ಹೊರ ಹಾಕಿ ಸಿಎಂ ಆದವರಿಂದ ಏನೋ ಸಾಧನೆಯಾಗುತ್ತದೆ, ಯೋಜನೆ ಬರುತ್ತದೆಂದರೆ ಸಾಧನೆ ಮಾತ್ರ ಸೊನ್ನೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ತಾಲೂಕಿನ ವಿವಿಧೆಡೆ ಬಿಜೆಪಿ ನಾಯಕರ ಜೊತೆ ಬರ ಪರಿಸ್ಥಿತಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕರ್ನಾಟಕದಲ್ಲಿ 2 ತಿಂಗಳಿಂದಲೂ ಮಳೆಗಾಗಿ ಜನರು ನಿರಂತರ ಪ್ರಾರ್ಥನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಇನ್ನೂ ಬರಗಾಲವನ್ನು ಘೋಷಣೆ ಮಾಡಿಲ್ಲ. ಬರ ಘೋಷಣೆ ಆದರಷ್ಟೇ ಕಾನೂನಿನಡಿ ಕೇಂದ್ರದಿಂದ ರಾಜ್ಯಕ್ಕೆ ಪರಿಹಾರ ನೀಡಲು ಅವಕಾಶ ಇದೆ ಎಂದರು.

ಬರ ಘೋಷಣೆ ಮಾಡಿದರೆ ವಿಮಾ ಕಂಪನಿಗಳೂ ಪರಿಹಾರ ನೀಡುತ್ತವೆ. ಇಲ್ಲವೆಂದರೆ, ವಿಮಾ ಕಂಪನಿಗಳಿಗೆ ಹಬ್ಬವೋ ಹಬ್ಬವಾಗುತ್ತದಷ್ಟೇ. ರಾಜ್ಯಾದ್ಯಂತ ಇಂದು ಬರಗಾಲ ಆವರಿಸಿದೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಶೇ.19ರಷ್ಟು ಮಾತ್ರವೇ ಬಿತ್ತನೆ ಮಾಡಲಾಗಿದೆ. ಬಿತ್ತನೆಯಾದ ಸೂರ್ಯಕಾಂತಿ ಹೂವನ್ನೇ ಬಿಟ್ಟಿಲ್ಲ. ಸಾಲು ಸಾಲು ಅಡಕೆ ತೋಟಗಳು ನೀರಿಲ್ಲದೇ ಒಣಗಿಹೋಗುತ್ತಿವೆ. ರಾಜ್ಯ ಸರ್ಕಾರ ಅಡಕೆ ಮರಕ್ಕೆ ಕೇವಲ ₹16 ಮಾತ್ರ ಪರಿಹಾರ ನೀಡುತ್ತದೆ. ಇದು ಬೇಜವಾಬ್ಧಾರಿಯ ಸರ್ಕಾರ ಆಗಿದೆ. ರಾಜ್ಯ ಸರ್ಕಾರವೂ ಖಾಲಿ ಖಾಲಿ, ರಾಜ್ಯದ ಜಲಾಶಯಗಳೂ ಖಾಲಿ ಖಾಲಿಯಾಗಿವೆ. ಡಿಕೆಶಿ ಸಿಎಂ ಆದ ನಂತರ ಪೂಜೆ, ವಿಭೂತಿ, ನಾಮ ಎಲ್ಲಾ ಆದರೂ, ಬರಗಾಲ ಇದೆ ಎಂದು ಅವರು ಹೇಳಿದರು.

ಬರಪೀಡಿತ ರಾಜ್ಯವೆಂದು ಘೋಷಣೆಯನ್ನೇ ಮಾಡದೇ, ಯಾವ ಆಧಾರದಲ್ಲಿ ಕೇಂದ್ರ ಸರ್ಕಾರಕ್ಕೆ ₹10 ಸಾವಿರ ಕೋಟಿ ಅನುದಾನ ಕೇಳುತ್ತೀರಿ? ಬರ ಘೋಷಣೆ ಮಾಡಿದರೆ ಹಣ ಬಿಡುಗಡೆ ಮಾಡಬೇಕಾಗುತ್ತದೆಂಬ ಕಾರಣಕ್ಕೆ ಬರ ಘೋಘಿಸಲು ಮೀನ ಮೇಷ ಎಣಿಸುತ್ತಿದ್ದಾರೆ. ಬರ ಘೋಷಿಸದೇ ರಾಜ್ಯದ ಅನ್ನದಾತ ರೈತರ ಜೀವ ಮತ್ತು ಜೀವನದ ಜೊತೆಗೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ 2 ತಿಂಗಳ ಅಂತರದಲ್ಲಿ 31 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರಕ್ಕೆ ಇದರ ಪರಿವೆಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ 3 ವರ್ಷದಲ್ಲಿ 2800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ರಾಷ್ಟ್ರೀಯ ವಿಪತ್ತು ಅಂತಾ ಕೇಂದ್ರ ಸರ್ಕಾರ ಘೋಷಿಸಬೇಕೆಂದು ಹೇಳುವುದು ಎಷ್ಟರಮಟ್ಟಿಗೆ ಸರಿ? ದೇಶದಲ್ಲಿ ಎಲ್ಲೆಲ್ಲಿ ಪ್ರಕೃತಿ ವಿಕೋಪವಾಗಿದೆ ಎಂದು ಆ ಎಲ್ಲ ರಾಜ್ಯಗಳ ಸಭೆ ಕರೆಯುತ್ತಾರೆ. ಎಲ್ಲ ರಾಜ್ಯಗಳಿಗೂ ಪರಿಹಾರ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಲು ಮಾನದಂಡವಿದೆ. ಅದೆಲ್ಲಾ ಅರಿವೇ ಇಲ್ಲದವರಂತೆ ₹10 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಕೇಳುತ್ತಿದ್ದಾರೆ. ಬರ ಘೋಷಣೆ ಮಾಡಿ, ಹಣ ಬಿಡುಗಡೆ ಮಾಡಿ, ಕೇಂದ್ರಕ್ಕೆ ಅನುದಾನ ಕೇಳಿ ಎಂದು ಹೇಳಿದರು.

ಭಾರತ್ ಜೋಡೋ ಕ್ಲಬ್ ಮಾಡಿ, ಅದಕ್ಕೆ ನೂರಾರು ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದೀರಿ. ಗ್ಯಾರಂಟಿ ಸಮಿತಿ ಸದಸ್ಯರು, ಅಧ್ಯಕ್ಷರಿಗೆ ಸರ್ಕಾರಿ ಬಂಗಲೆ, ಅಂತಹವರಿಗೆ ಕೋಟಿಗಟ್ಟಲೇ ಸಂಬಳಕ್ಕೆ ಹಣ ಖರ್ಚು ಮಾಡುತ್ತಿದ್ದೀರಿ. ಜಿಲ್ಲಾ ತಾಲೂಕು ಘಟಕಗಳ ಅಧ್ಯಕ್ಷರಿಗೂ ಸಂಬಳ ನೀಡುತ್ತಿದ್ದಾರೆ. ನನಗೆ ಮೂರೂವರೆ ವರ್ಷದಿಂದ ಬಂಗಲೆ ಕೊಟ್ಟಿಲ್ಲ. ಗ್ಯಾರಂಟಿ ಸಮಿತಿ, ಭಾರತ್ ಜೋಡೋ ಕ್ಲಬ್‌ಗೆ ಹಣ ಹೋಗುತ್ತಿದೆ. ಆದರೆ, ರೈತರಿಗೆ ಹಣ ನೀಡುತ್ತಿಲ್ಲ. ಗಂಜಿ ಕೇಂದ್ರಗಳಿಗೂ ಹಣ ನೀಡುತ್ತಿಲ್ಲ ಎಂದು ಆರ್.ಅಶೋಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

- - -

(ಬಾಕ್ಸ್‌-1)

* ನೇರ್ಲಿಗೆಯಲ್ಲಿ ಒಣಗಿದ ಅಡಕೆ ತೋಟಕ್ಕೆ ಬಿಜೆಪಿ ಭೇಟಿ ದಾವಣಗೆರೆ: ವಿಪಕ್ಷ ನಾಯಕ ಆರ್.ಅಶೋಕ ನೇತೃತ್ವದ ಬಿಜೆಪಿ ಮುಖಂಡರ ತಂಡವು ದಾವಣಗೆರೆ ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೇರ್ಲಿಗೆ ಗ್ರಾಮದ ಅಡಕೆ ತೋಟಕ್ಕೆ ಬುಧವಾರ ಭೇಟಿ ನೀಡಿ, ಜಿಲ್ಲೆಯ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು.

ನೇರ್ಲಿಗೆ ಅಡಕೆ ತೋಟವೊಂದಕ್ಕೆ ಭೇಟಿ ನೀಡಿದ್ದ ಆರ್.ಅಶೋಕ ನೇತೃತ್ವದ ತಂಡದ ಸದಸ್ಯರು ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಬತ್ತಿರುವ ಕೊಳವೆ ಬಾವಿಯಿಂದಾಗಿ ಫಲಕ್ಕೆ ಬಂದಿದ್ದ ಅಡಕೆ ತೋಟ ಸಂಪೂರ್ಣ ಒಣಗುತ್ತಿರುವುದನ್ನು ಗಮನಿಸಿತು.

ರೈತರ ಅಡಕೆ ತೋಟದಿಂದಲೇ ಆರ್.ಅಶೋಕ, ಮಾಜಿ ಸಚಿವ ಬಸವರಾಜ ಭೈರತಿ, ಹರಿಹರ ಶಾಸಕ ಬಿ.ಪಿ.ಹರೀಶ, ಡಾ.ಚಂದ್ರು ಲಮಾಣಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು, ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ರಾಜ್ಯವನ್ನು ಬರಪೀಡಿತವೆಂದು ಘೋಷಿಸುವಂತೆ ಒತ್ತಾಯಿಸಿದರು.

ಆರ್.ಅಶೋಕ ಮಾತನಾಡಿ, 1 ಅಡಕೆ ಮರಕ್ಕೆ ಕೇವಲ ₹16 ಪರಿಹಾರವನ್ನು ಕಾಂಗ್ರೆಸ್ ಸರ್ಕಾರದವರು ಘೋಷಣೆ ಮಾಡುತ್ತಾರೆ. ಒಂದು ಕ್ಯಾಡಬರಿ ಚಾಕ್ಲೆಟ್ ಬೆಲೆ ₹20 ಇದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ, ಬರ ಪರಿಶೀಲನೆ ಮಾಡುತ್ತಿದ್ದೇವೆ. ಎಷ್ಟು ಪರಿಹಾರ ನೀಡುತ್ತೇವೆಂಬುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಘೋಷಣೆ ಮಾಡೇಕಾಗಿತ್ತು ಎಂದರು.

ಚಿತ್ರದುರ್ಗ ಜಿಲ್ಲೆಗೆ ಸಿಎಂ ಡಿ.ಕೆ.ಶಿವಕುಮಾರ ಸಚಿವರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಬರ ಪರಿಸ್ಥಿತಿ ನೋಡಿದ್ದಾರೆ. ಆದರೆ, ಪರಿಹಾರವನ್ನೇನೂ ಘೋಷಿಸಿಲ್ಲ. ಬರ ಪರಿಹಾರಕ್ಕೆ ತಕ್ಷಣ‍ೇ ರಾಜ್ಯ ಸರ್ಕಾರ ₹10 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಆದರೆ, ರೈತರ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆನ್ನಿಗೆ ನಿಲ್ಲಬೇಕಾಗಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂಪುಟ ವಿಸ್ತರಣೆಗಾಗಿ ದೆಹಲಿಗೆ ಹೋಗಿ, ಫೈವ್‌ ಸ್ಟಾರ್ ಹೋಟೆಲಲ್ಲಿದ್ದಾರೆ ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.

- - -

(ಬಾಕ್ಸ್‌-2)

* ದಾವಣಗೆರೆ ಬರಪೀಡಿತ ಜಿಲ್ಲೆಯೆಂದು ಘೋಷಿಸಿ: ಗುರುಬಸಪ್ಪ

ಮುಂಗಾರು ಕೈ ಕೊಟ್ಟಿದ್ದರಿಂದ ನಾವೆಲ್ಲರೂ ಸಂಕಷ್ಟದಲ್ಲಿದ್ದೇವೆ. ಮಕ್ಕಳಂತೆ ಜತನದಿಂದ ಆರೈಕೆ ಮಾಡಿ, ಬೆಳೆಸಿದ್ದ ಅಡಕೆ ಮರಗಳು ಒಂದೊಂದಾಗಿ ಒಣಗಲಾರಂಭಿಸಿವೆ. ಬೆಳೆಗಳನ್ನು ಉಳಿಸಿಕೊಳ್ಳಲು ಕೊಳವೆಬಾವಿ ಕೊರೆಸಿದರೂ ನೀರು ಮಾತ್ರ ಸಿಗುತ್ತಿಲ್ಲ. ಅಂತರ್ಜಲ ಕುಸಿತದಿಂದ ಬೋರ್‌ಗಳು ಸಂಪೂರ್ಣ ಬತ್ತಿವೆ. ತಮ್ಮ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಸಾವಿರಾರು ಅಡಕೆ ಮರಗಳು ಒಣಗುವ ಸ್ಥಿತಿಯಲ್ಲಿವೆ. ಲಕ್ಷಾಂತರ ರು. ಸುರಿದು ವರ್ಷಗಳ ಕಾಲ ಬೆವರು ಹರಿಸಿ, ಅವುಗಳನ್ನು ಬೆಳೆಸಿದ್ದೇವೆ. ಫಸಲು ಕೈಗೆ ಬರುವ ವೇಳೆ ಮಳೆ ಕೈಕೊಟ್ಟಿದೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದು, ಬ್ಯಾಂಕ್ ನೋಟಿಸ್ ಬರುತ್ತಿವೆ. ದಾವಣಗೆರೆ ಜಿಲ್ಲೆಯನ್ನು ಬರಪೀಡಿತವೆಂದು ಸರ್ಕಾರ ಘೋಷಿಸಲಿ ಎಂದು ನೇರ್ಲಿಗೆ ಗ್ರಾಮದ ಹಿರಿಯ ರೈತ ಗುರುಬಸಪ್ಪ ಒತ್ತಾಯಿಸಿದರು.

- - -

-(ಫೋಟೋಗಳಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವ ಸಾಯಿ ಕೃಪಾದಲ್ಲಿ ಗುರು ಸ್ಮರಣೆ
ಎಲ್ಲ ತಾಲೂಕುಗಳಿಗೂ ತಲಾ ₹50 ಕೋಟಿ ಬಿಡುಗಡೆಗೊಳಿಸಿ