ಶಿಥಿಲಗೊಂಡ ಶಾಲೆಯಲ್ಲಿ ಮಕ್ಕಳನ್ನು ಕೂಡಿಸಬೇಡಿ

KannadaprabhaNewsNetwork | Published : Apr 23, 2025 12:33 AM

ಸಾರಾಂಶ

ಶಾಲಾ ಮಕ್ಕಳ ಸುರಕ್ಷತೆ ಕುರಿತು ಶಿಕ್ಷಣ, ಸಮಾಜ ಕಲ್ಯಾಣ, ಬಿಸಿಎಂ ಹಾಸ್ಟೇಲ್, ಅಂಗನವಾಡಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು.

ಸಿದ್ದಾಪುರ: ಶಾಲಾ ಮಕ್ಕಳ ಸುರಕ್ಷತೆ ಕುರಿತು ಶಿಕ್ಷಣ, ಸಮಾಜ ಕಲ್ಯಾಣ, ಬಿಸಿಎಂ ಹಾಸ್ಟೇಲ್, ಅಂಗನವಾಡಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು. ಯಾವುದೇ ಕಟ್ಟಡ ಶಿಥಿಲವಾಗಿದ್ದರೆ ಅಂತಹ ಸ್ಥಳದಲ್ಲಿ ಮಕ್ಕಳನ್ನು ಕೂಡಿಸಬೇಡಿ ಎಂದು ತಾಪಂ ಆಡಳಿತಾಧಿಕಾರಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ.ಬಸವರಾಜ್ ಹೇಳಿದರು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಇಒ ಎಂ.ಎಚ್.ನಾಯ್ಕ ಮಾತನಾಡಿ, ಶಿಥಿಲಗೊಂಡ ಶಾಲಾ ಕಟ್ಟಡಗಳು ಹಾಗೂ ದುರಸ್ತಿ ಮಾಡುವ ಕೊಠಡಿಗಳ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದೆ. ಹೊಸಳ್ಳಿ ಎಚ್‌ಪಿ ಶಾಲೆಯ ಕಟ್ಟಡ ಶೀಘ್ರದಲ್ಲಿಯೇ ದುರಸ್ತಿ ಆಗಬೇಕಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಡಿಮೆ ಮಕ್ಕಳಿರುವ ಶಾಲೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಮೀಪ ಇರುವ ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ಪಾಲಕರಿಗೆ ತಿಳಿಸಲಾಗುವುದು ಎಂದರು.

ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಮಾರ್ಚ್ ತಿಂಗಳಲ್ಲಿ ೧೨೫ ಜನರಿಗೆ ನಾಯಿ ಕಡಿದಿದೆ. ಔಷಧದ ಕೊರತೆ ಇಲ್ಲ. ತಾಲೂಕಿನ ಕಾನಸೂರು ಸಮೀಪದ ಕೋಡ್ಸರದಲ್ಲಿ ಈ ವರ್ಷ ಪ್ರಥಮವಾಗಿ ಯುವಕನಿಗೆ ಮಂಗನಕಾಯಿಲೆ ಕಂಡು ಬಂದಿದೆ ಎಂದರು.

ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕ ಹೆಗಡೆ ಮಾತನಾಡಿ, ಏ.೨೬ರಿಂದ ಜಾನುವಾರುಗಳಿಗೆ ಕಾಲುಬಾಯಿ ಹಾಗೂ ಚರ್ಮಗಂಟು ರೋಗದ ಲಸಿಕೆ ನೀಡಲಾಗುತ್ತದೆ. ತಾಲೂಕಿನಲ್ಲಿ ಅಂದಾಜು ೩೫೭೬೨ ಜಾನುವಾರುಗಳಿದೆ.ಪ್ರಸಕ್ತ ವರ್ಷ ಜಾನುವಾರು ಮೇವಿನ ಕೊರತೆ ಇಲ್ಲ ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಾ ಎಂ.ಎಸ್. ಮಾತನಾಡಿ, ತಾಲೂಕಿನಲ್ಲಿ ಏಪ್ರಿಲ್ ತಿಂಗಳ ಇಂದಿನವರೆಗೆ ೨೧ ಮಿ.ಮೀ. ಮಳೆ ಬಿದ್ದು, ವಾಡಿಕೆ ಮಳೆಗಿಂತ ಶೇ.೬೦ರಷ್ಟು ಹೆಚ್ಚಾಗಿದೆ. ಇದರಿಂದ ಯಾವುದೇ ಬೆಳೆಗೆ ಹಾನಿ ಆಗಿಲ್ಲ. ಬೇಸಿಗೆ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅರುಣ ಎಚ್.ಜಿ. ಮಾತನಾಡಿ ಕೊರ್ಲಕೈ ಹಾಗೂ ದೊಡ್ಮನೆ ಗ್ರಾಪಂ ವ್ಯಾಪ್ತಿಯ ಕೃಷಿಕರಿಗೆ ಕಳೆದ ವರ್ಷದ ಬೆಳೆ ವಿಮೆ ₹೧.೦೪ ಕೋಟಿ ಜಮಾ ಆಗಿದೆ. ಉಳಿದ ಗ್ರಾಪಂ ವ್ಯಾಪ್ತಿಯ ರೈತರಿಗೆ ಜಮಾ ಆಗಿಲ್ಲ. ಉಳಿದವರಿಗೆ ಬೆಳೆ ವಿಮೆ ನೀಡುವಂತೆ ಕೇಂದ್ರ ಸರ್ಕಾರ ಈಗಾಗಲೇ ಎರಡು ಸಲ ವಿಮಾ ಕಂಪನಿಗೆ ನೋಟಿಸ್ ನೀಡಿದೆ. ಆದರೂ ನೀಡಿಲ್ಲ ಎಂದರು.

ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ತಾಪಂ ವ್ಯವಸ್ಥಾಪಕ ಬಸವರಾಜ, ಹೆಸ್ಕಾಂ, ನೀರಾವರಿ, ಸಮಾಜ ಕಲ್ಯಾಣ, ಜಿಪಂ, ಲೋಕೋಪಯೋಗಿ, ಸಿಡಿಪಿಒ ಮತ್ತಿತರ ಇಲಾಖೆ ಅಧಿಕಾರಿಗಳಿದ್ದರು.

Share this article