ನೂರತ್ತು ಕೆರೆ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸಿಗುತ್ತಾ?

KannadaprabhaNewsNetwork |  
Published : Apr 23, 2025, 12:33 AM IST
22ಜಿಪಿಟಿ4ಎಚ್.ಎಂ.ಗಣೇಶ್‌ ಪ್ರಸಾದ್‌ | Kannada Prabha

ಸಾರಾಂಶ

ಕಳೆದ ಮಾ.7ರಂದು ಕನ್ನಡಪ್ರಭ ಪತ್ರಿಕೆ ನೂರತ್ತು ಕೆರೆ, ಕಟ್ಟೆ ಯೋಜನೆ ಬಜೆಟ್‌ನಲ್ಲಿ ಘೋಷಣೆ ಆಗುತ್ತಾ? ಎಂದು ವರದಿ ಪ್ರಕಟಿಸಿತ್ತು.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ನೂರತ್ತು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಕಳೆದ ಮಾ.7ರಂದು ರಾಜ್ಯ ಸರ್ಕಾರದ ಮಂಡಿಸಿದ ಬಜೆಟ್‌ನಲ್ಲಿ ಘೋಷಣೆಯಾಗಲಿಲ್ಲ. ಏ.24 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಥಮ ಭಾರಿಗೆ ನಡೆಯುವ ಸಂಪುಟ ಸಭೆಯಲ್ಲಿ ಘೋಷಣೆಯಾಗಲಿದೆಯಾ?ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆ ನಡೆಸುತ್ತಿರುವ ಕಾರಣ ಜಿಲ್ಲೆಗೆ ಅದರಲ್ಲೂ ಆಯಾಯ ತಾಲೂಕುಗಳಿಗೆ ವಿಶೇಷ ಅನುದಾನ, ಹೊಸ ಹೊಸ ಯೋಜನೆಗಳಿಗೆ ಅನುಮತಿ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿದ್ದಾರೆ. ಕಳೆದ ಬಜೆಟ್‌ನಲ್ಲಿಯೇ ನೂರತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಘೋಷಣೆ ಆಗುತ್ತದೆ ಎಂಬ ಮಾತು ಕೇಳಿ ಬಂದಿತ್ತು.

ಬಜೆಟ್‌ನಲ್ಲಿ ಘೋಷಣೆಯಾಗಲಿಲ್ಲ. ಕಾರಣ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಬಜೆಟ್‌ ಮುನ್ನ ನಿಗದಿಗೊಂಡಿತ್ತು. ಬಜೆಟ್‌ನಲ್ಲಿ ಘೋಷಣೆಯಾಗದಿದ್ದಾಗ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬಂತು. ಏ.24ರ ಗುರುವಾರ ಮಹದೇಶ್ವರ ಬೆಟ್ಟದಲ್ಲಿ ಪ್ರಥಮ ಭಾರಿಗೆ ಸಚಿವ ಸಂಪುಟ ಸಭೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ನೂರತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ಕೊಡುತ್ತಾ ಎಂಬುದು ಸದ್ಯದ ಪ್ರಶ್ನೆ.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪ್ರಕಾರ ನೂರತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಬೋರ್ಡ್‌ ಮೀಟಿಂಗ್‌ನಲ್ಲಿ ಒಪ್ಪಿಗೆ ಸಿಕ್ಕಿದೆ. ಆರ್ಥಿಕ ಇಲಾಖೆಯಲ್ಲಿ ಒಪ್ಪಿಗೆ ಸಿಗಬೇಕಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳ ಬಳಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಒತ್ತಡ ಹೇರಿದ್ದರು. ಆದರೆ ಬಜೆಟ್‌ನಲ್ಲಿ ಘೋಷಣೆಯಾಗಲಿಲ್ಲ. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದಿದ್ದು, ಮಲೆಮಹದೇಶ್ವರ ಬೆಟ್ಟದಲ್ಲಿ ಏ.24 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮತಿಗೆ ಶ್ರಮ ಹಾಕಿದ್ದಾರೆ ಎನ್ನಲಾಗಿದೆ.

ಏನಿದು ಯೋಜನೆ?:

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ತಾಲೂಕಿನ ನೂರತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೂರತ್ತು ಕೆರೆ, ಕಟ್ಟೆಗಳಿಗೆ ನೀರು ಯೋಜನೆಗೆ ಜಸ್ಟೀಸ್‌ ಸಮಿತಿ ಕೂಡ ಒಪ್ಪಿಗೆ ನೀಡಿತ್ತು. ಆದರೆ 430 ಕೋಟಿ ಅನುದಾನ ಒಂದೇ ಹಂತದಲ್ಲಿ ನೀಡಲು ಆಗುವುದಿಲ್ಲ ಎಂದು ಹಣಕಾಸು ಇಲಾಖೆ ಹೇಳಿತ್ತು. ಎರಡು ಹಂತದ ಪ್ರಸ್ತಾವನೆ ಸಲ್ಲಿಸಿ ಎಂದು ಸಲಹೆ ಕೂಡ ನೀಡಿತ್ತು. ಆ ವೇಳೆಗೆ 2023ರ ವಿಧಾನಸಭೆ ಚುನಾವಣೆ ಬಂದ ಹಿನ್ನೆಲೆ ನೂರತ್ತು ಕೆರೆ, ಕೆಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ನೆನಗುದಿಗೆ ಬಿದ್ದಿತು.

2023 ರ ವಿಧಾನಸಬೆ ಚುನಾವಣೆಯಲ್ಲಿ ಎಚ್.ಎಂ.ಗಣೇಶ್‌ ಪ್ರಸಾದ್‌ ಕಾಂಗ್ರೆಸ್‌ ಶಾಸಕರಾದರು. ರಾಜ್ಯದಲ್ಲಿ ಜನರ ನಿರೀಕ್ಷೆಯಂತೆಯೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ನೂತನ ಶಾಸಕ ಗಣೇಶ್‌ ಪ್ರಸಾದ್‌ ತಾಲೂಕಿನ ನೂರತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲು ಮುಂದಾಗಿ, ಮತ್ತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯಗೆ ಆತ್ಯಾಪ್ತ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಈ ಯೋಜನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಈ ಯೋಜನೆ ಜಾರಿಯಾದರೆ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ತೊಂದರೆ ತಪ್ಪಲಿದೆ ಎಂದೂ ಶಾಸಕರು ಕ್ಷೇತ್ರದಲ್ಲಿ ನಡೆದ ಸಭೆ, ಸಮಾರಂಭಗಳಲ್ಲಿ ಹೇಳಿದ್ದರು. ಅಲ್ಲದೆ ಮುಖ್ಯಮಂತ್ರಿ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಜನತೆಗೆ ಭರವಸೆ ನೀಡಿದ್ದರು. ತಾಲೂಕಿನ ನೂರತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ 430 ಕೋಟಿ ಸಾಕಾಗಲ್ಲ, 475 ಕೋಟಿ ಅನುದಾನ ಬೇಕು ಎಂದು ಪ್ರಸ್ತಾವನೆಯನ್ನು ಕಾವೇರಿ ನೀರಾವರಿ ನಿಗಮದ ಮೂಲಕ ಶಾಸಕರು ಸಲ್ಲಿಸಿದ್ದಾರೆ.

ಕಳೆದ ಮಾ.7 ರಂದು ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗದ 100 ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಶಾಸಕರು ಸೇರಿದಂತೆ ಕ್ಷೇತ್ರದ ಜನರು ಇದ್ದಾರೆ.ಕಾವೇರಿ ನೀರಾವರಿ ನಿಗಮದ ನಿರ್ದೇಶಕರ 85ನೇ ಮಂಡಳಿ ಸಭೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮೋದನೆ ಕೂಡ ಆಗಿದೆ. ಮುಖ್ಯಮಂತ್ರಿ ಕೂಡ ಈ ಯೋಜನೆಗೆ ಅಸ್ತು ಎಂದಿದ್ದಾರೆ. ಖಂಡಿತ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗಲಿದೆ.-ಎಚ್.ಎಂ.ಗಣೇಶ್‌ ಪ್ರಸಾದ್‌, ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''