ಇಳಿ ವಯಸ್ಸಿನಲ್ಲೂ ಕುಗ್ಗದ ಉತ್ಸಾಹ, ನರೇಗಾ ಕೂಲಿಯಿಂದ ಜೀವನ ನಿರ್ವಹಣೆ

KannadaprabhaNewsNetwork |  
Published : Apr 23, 2025, 12:33 AM IST
ಪೋಟೊ22ಕೆಎಸಟಿ3: ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಬನಾಳ ವೃದ್ದೆ ಪಾರ್ವತಿ ವಾಲ್ಮೀಕಿ ಅವರು ನರೇಗಾದಲ್ಲಿ ಕೆಲಸ ಮಾಡುತ್ತಿರುವದು. | Kannada Prabha

ಸಾರಾಂಶ

ಕುರುಬನಾಳದ ಪಾರ್ವತಮ್ಮ ತಿಮ್ಮಣ್ಣ ವಾಲ್ಮೀಕಿ (76) 8 ವರ್ಷದಿಂದ ನರೇಗಾ ಯೋಜನೆಯಡಿ ಕಾಮಗಾರಿಯಲ್ಲಿ ಭಾಗವಹಿಸಿ ನಾನೇನು ಕಮ್ಮಿಯಿಲ್ಲ ಎಂಬಂತೆ ಯುವಜನತೆ ನಾಚುವಂತೆ ಕೆರೆ ಹೂಳೆತ್ತುವುದು, ನಾಲಾ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಇಳಿ ವಯಸ್ಸಿನಲ್ಲೂ ವೃದ್ಧೆಯೊಬ್ಬರು ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ತಾಲೂಕಿನ ಕಂದಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬನಾಳದ ಪಾರ್ವತಮ್ಮ ತಿಮ್ಮಣ್ಣ ವಾಲ್ಮೀಕಿ (76) 8 ವರ್ಷದಿಂದ ನರೇಗಾ ಯೋಜನೆಯಡಿ ಕಾಮಗಾರಿಯಲ್ಲಿ ಭಾಗವಹಿಸಿ ನಾನೇನು ಕಮ್ಮಿಯಿಲ್ಲ ಎಂಬಂತೆ ಯುವಜನತೆ ನಾಚುವಂತೆ ಕೆರೆ ಹೂಳೆತ್ತುವುದು, ನಾಲಾ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ತಮ್ಮ 1.20 ಎಕರೆ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಈ ವೃದ್ಧೆ ಹೊಲದಲ್ಲಿ ಕೆಲಸವಿಲ್ಲದ ಸಮಯದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ.

ಕುಗ್ಗದ ಉತ್ಸಾಹ:

76 ವರ್ಷವಾದರೂ ಸಹಿತ ಇನ್ನೂ 20ರ ಹರೆಯದವರಂತೆ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದು ಇನ್ನೂ ಉತ್ಸಾಹ ಕುಗ್ಗಿಲ್ಲ. ಈ ಉತ್ಸಾಹದ ಗುಟ್ಟೇನು ಎಂದು ಕೇಳಿದಾಗ ದಿನಂಪ್ರತಿ ಜೋಳದ ರೊಟ್ಟಿ, ನವಣಕ್ಕಿ ಅನ್ನ, ಹಾಲು-ಮೊಸರು, ಕಾಯಿಪಲ್ಯ ಅಧಿಕವಾಗಿ ಸೇವಿಸಿ, ಹೆಚ್ಚು ನೀರು ಸೇವಿಸಿದರೆ ಯಾವುದೇ ರೋಗ ಬರುವುದಿಲ್ಲ. ಗಟ್ಟಿಮುಟ್ಟಿಯಾಗಿಯೇ ಇರುತ್ತೇವೆ ಎನ್ನುತ್ತಾ ತಮ್ಮ ಉತ್ಸಾಹದ ಗುಟ್ಟನ್ನು ಹೇಳುತ್ತಾರೆ ಈ ಅಜ್ಜಿ.

ಕಾಯಿಲೆಗಳು ದೂರ:

ಇಳಿವಯಸ್ಸಾದರೂ ಈ ವರೆಗೆ ಬಿಪಿ, ಶುಗರ ಸೇರಿದಂತೆ ಇನ್ನಿತರ ಯಾವದೇ ಕಾಯಿಲೆ ಇವರತ್ತ ಸುಳಿದಿಲ್ಲ. ಕಿವಿಗಳು ಸ್ಪಷ್ಟವಾಗಿ ಕೇಳುತ್ತವೆ, ಕಣ್ಣು ಕಾಣುತ್ತವೆ. ಕೂಲಿ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಯುವಕರು ನಾಚಿಸುವಂತೆ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನರೇಗಾ ಕೂಲಿ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಯುವ ಕೂಲಿಕಾರರಿಗೆ ಸ್ಫೂರ್ತಿಯಾಗಿ, ಇಳಿ ವಯಸ್ಸಿನಲ್ಲಿಯೂ ಯಾರನ್ನೂ ನೆಚ್ಚಿಕೊಳ್ಳದೆ ನಿತ್ಯದ ಕಾಯಕದೊಂದಿಗೆ ಸ್ವಾವಲಂಬಿಗಳಾಗಿದ್ದಾರೆ.

ವೃದ್ಧೆ ನರೇಗಾ ಯೋಜನೆಯಡಿ ಬಂದ ಕೂಲಿ ಹಣವನ್ನು ತಮ್ಮ 2 ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾರೆ. ಮೊಮ್ಮಕ್ಕಳು ಶೈಕ್ಷಣಿಕವಾಗಿ ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸಲಿ ಎಂಬ ಹೆಬ್ಬಯಕೆ ಇವರದ್ದಾಗಿದೆ.

ಐವತ್ತು ಪೈಸೆಯಲ್ಲಿ ಕೆಲಸ ಮಾಡಿದ್ದ ನಾವು ಇಂದು ನರೇಗಾ ಯೋಜನೆಯಿಂದ ದಿನಕ್ಕೆ ₹ 370 ಕೂಲಿ ಪಡೆಯುತ್ತಿರುವುದು ತುಂಬಾ ಖುಷಿಯಾಗಿದೆ. ಈ ಯೋಜನೆಯಿಂದ ಕುಟುಂಬ ನಿರ್ವಹಣೆ, ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿದೆ.

ಪಾರ್ವತಮ್ಮ ವಾಲ್ಮೀಕಿ ಕುರುಬನಾಳ ಕುಷ್ಟಗಿ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಾ ಅನೇಕರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಒಟ್ಟಿನಲ್ಲಿ ಯೋಜನೆಯು ಗುಳೆ ಹೋಗುವುದನ್ನು ತಪ್ಪಿಸಲು ಸಹಕಾರಿಯಾಗಿದೆ.

ಪಂಪಾಪತಿ ಹಿರೇಮಠ, ಇಒ ತಾಪಂ ಕುಷ್ಟಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''