ಕುಷ್ಟರೋಗದ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಬೇಡ: ಶಿವಾನಂದ

KannadaprabhaNewsNetwork |  
Published : May 19, 2024, 01:46 AM IST
16ಕೆಪಿಎಲ್21 ಕುಷ್ಟಗಿ ಗ್ರಾಮದಲ್ಲಿ  ಕುಷ್ಟ ರೋಗ ನಿವಾರಣಾ ಜಾಗೃತಿ ಕಾರ್ಯಕ್ರಮ | Kannada Prabha

ಸಾರಾಂಶ

ಚರ್ಮದಲ್ಲಾಗುವ ಬದಲಾವಣೆಗಳು ಕುಷ್ಟರೋಗದ ಲಕ್ಷಣಗಳಾಗಿರಬಹುದು. ಅಂತಹ ಯಾವುದೇ ಚರ್ಮದ ಬದಲಾವಣೆಯನ್ನು ನಿರ್ಲಕ್ಷ್ಯ ಮಾಡದೆ ಸಮೀಪದ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕು.

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಚರ್ಮದಲ್ಲಾಗುವ ಬದಲಾವಣೆಗಳು ಕುಷ್ಟರೋಗದ ಲಕ್ಷಣಗಳಾಗಿರಬಹುದು. ಅಂತಹ ಯಾವುದೇ ಚರ್ಮದ ಬದಲಾವಣೆಯನ್ನು ನಿರ್ಲಕ್ಷ್ಯ ಮಾಡದೆ ಸಮೀಪದ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಯಲಬುರ್ಗಾ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಳೂಟಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಬಳೂಟಗಿ ವ್ಯಾಪ್ತಿಯ ಚಿಕ್ಕೋಪ್ಪ ತಾಂಡಾದ ಶ್ರೀ ಸೇವಾಲಾಲ ದೇವಸ್ಥಾನದ ಹತ್ತಿರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಯಾರಿಗಾದರೂ ಮೈ ಮೇಲೆ ತಿಳಿ-ಬಿಳಿ ತಾಮ್ರವರ್ಣದ ಸ್ಪರ್ಶಜ್ಞಾನವಿಲ್ಲದ 5 ಅಥವಾ 5ಕ್ಕಿಂತ ಹೆಚ್ಚು ಮಚ್ಚೆಗಳು ಇದ್ದರೆ, ಪಾದಗಳ ದೌರ್ಬಲ್ಯ, ಬೆರಳುಗಳ ದೌರ್ಬಲ್ಯ, ತ್ವಚೆಯ ಮೇಲೆ ಕೆಂಪಾದ ಬಾವು, ಕಣ್ಣು ಮುಚ್ಚುವಲ್ಲಿ ತೊಂದರೆ ಕಾಣಿಸಿಕೊಂಡರೆ, ಇವು ಕುಷ್ಟರೋಗದ ಲಕ್ಷಣಗಳಾಗಿರಬಹುದು. ಆದ್ದರಿಂದ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಂಡು, ಖಚಿತ ಪಟ್ಟರೆ ಉಚಿತವಾಗಿ ಚಿಕಿತ್ಸೆ ಪಡೆಯಿರಿ. ಇದಕ್ಕೆ ಯಾರೂ ಹಿಂಜರಿಯಬಾರದು. ಇದು ಮೈಕ್ರೊಬ್ಯಾಕ್ಟಿರಿಯಾ ಲೆಪ್ರೆಂ ಎಂಬ ಸೂಕ್ಷ್ಮಾಣವಿನಿಂದ ಗಾಳಿ ಮೂಲಕ ಹರಡುತ್ತದೆ. ಇದೊಂದು ಸಾಂಕ್ರಾಮಿಕ ರೋಗವಾಗಿದೆ. ರೋಗಿಯು ಕೆಮ್ಮುವುದರ ಮೂಲಕ ಮತ್ತು ಸೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಖಂಡಿತ ಗುಣಮುಖವಾಗುವ ಕಾಯಿಲೆಯಾಗಿದೆ. ಎಂ.ಡಿ.ಟಿ. ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಚನ್ನಬಸಯ್ಯ ಸರಗಣಚಾರಿ ಮಾತನಾಡಿ, ಕುಷ್ಠರೋಗ ಯಾವುದೇ ದೇವರ ಶಾಪ ಹಾಗೂ ಪಾಪ ಮಾಡವುದರಿಂದ ಬರುವುದಿಲ್ಲ. ಇದು ಮೈಕ್ರೊಬ್ಯಾಕ್ಟಿರಿಯಾ ಲೆಪ್ರೆಂ ಎಂಬ ಸೂಕ್ಷ್ಮಾಣವಿನಿಂದ ಹರಡುತ್ತದೆ. ಇದಕ್ಕೆ ಸಂಪೂರ್ಣವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ. ಚರ್ಮದ ಯಾವುದೇ ಕಾಯಿಲೆ ಇದ್ದರೂ ತಮ್ಮ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದಾಗ ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಆರ್.ಸಿ.ಎಚ್. ಕಾರ್ಯಕ್ರಮ, ಕುಟುಂಬ ಕಲ್ಯಾಣ ಕಾರ್ಯಕ್ರಮ, ಸೋಂಕಿತ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಲಾಯಿತು. ಗ್ರಾಮದಲ್ಲಿ 7 ತಂಡಗಳನ್ನು ರಚನೆ ಮಾಡಿ, ಮನೆ ಮನೆಗೆ ಭೇಟಿ ನೀಡಿ, ಕರಪತ್ರ ಹಂಚುವುದರ ಮೂಲಕ ಆರೋಗ್ಯ ತಪಾಸಣೆ ಮಾಡಿ, ಅರಿವು ಮೂಡಿಸಲಾಯಿತು.

ಮೇಲ್ವಿಚಾರಕರಾದ ವೀರಭದ್ರಪ್ಪ, ಬಸವರಾಜ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಂಗಯ್ಯ ಕೆ., ಪರಶುರಾಮ, ರಾಜಶೇಖರ, ಸಿ.ಎಚ್.ಒಗಳಾದ ಪವನಕುಮಾರ, ಆನಂದಕುಮಾರ, ಆಶಾ ಕಾರ್ಯಕರ್ತೆಯರು, ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?