ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ 92 ನೇ ವರ್ಷದ ಹುಟ್ಟುಹಬ್ಬವನ್ನು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಆಚರಿಸಿದರು.ಎಚ್.ಡಿ.ದೇವೇಗೌಡರಿಗೆ ದೀರ್ಘ ಆಯಸ್ಸು ಕೋರಿ ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ಕೋಟೆ ಭೈರವೇಶ್ವರನಿಗೆ ಶಾಸಕ ಎಚ್.ಟಿ ಮಂಜು ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಮುಖಂಡರು, ಅನಂತರ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ನಂತರ ಮಾತನಾಡಿದ ಶಾಸಕ ಎಚ್.ಟಿ.ಮಂಜು, ದೇಶ ಕಂಡ ಅಪರೂಪದ ರಾಜಕಾರಣಿ, ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.ದೇವೇಗೌಡರು ಪ್ರಧಾನಿಗಳಾಗಿ ತಮ್ಮ ಅಧಿಕಾರದ ಅವಧಿಯಲ್ಲಿ ದೇಶದ ರೈತರು, ಕಾರ್ಮಿಕರು, ಸೇರಿ ದುಡಿಯುವ ಶ್ರಮಿಕ ವರ್ಗದ ಪರ ಕೆಲಸ ಮಾಡಿದ್ದರು. ಸಮಾಜದ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವಂತಹ ಕಾರ್ಯಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ದೇಶದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಮಹಿಳೆಯರು ಸೇರಿ ಎಲ್ಲಾ ಶೋಷಿತ ಸಮುದಾಯಗಳಿಗೂ ಸಮಾನತೆಯಿಂದ ಲಾಭ ಸಿಗುವಂತೆ ಮೀಸಲಾತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.ತಮ್ಮ 92 ರ ಇಳಿ ವಯಸ್ಸಿನಲ್ಲೂ ದೇಶ ಮತ್ತು ರಾಜ್ಯದ ರೈತರ, ದೀನ ,ದಲಿತರ ಬಗ್ಗೆ ಸದಾ ಚಿಂತಿಸುತ್ತಿರುವ ಏಕೈಕ ಅಪರೂಪದ ರಾಜಕಾರಣಿ ಎಂದರೆ ದೇವೇಗೌಡರು. ಇವರ ಸೇವೆ ದೇಶ ಮತ್ತು ರಾಜ್ಯಕ್ಕೆ ಅವಶ್ಯಕತೆ ಇರುವುದರಿಂದ ಅವರಿಗೆ ಭಗವಂತ ಆರೋಗ್ಯ ಮತ್ತು ಆಯಸ್ಸನ್ನು ನೀಡಲೆಂದು ಪ್ರಾರ್ಥಿಸಿದ್ದೇವೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ತಾಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಿ.ಎಸ್.ಧನಂಜಯ್ ಕುಮಾರ್, ಹೋಬಳಿ ಘಟಕದ ಅಧ್ಯಕ್ಷ ಸಂತೆಬಾಚಹಳ್ಳಿ ರವಿ ಕುಮಾರ್, ಅಕ್ಕಿಹೆಬ್ಬಾಳು ಬಸವಲಿಂಗಪ್ಪ, ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತ್ ಕುಮಾರ್, ಬಲ್ಲೇನಹಳ್ಳಿ ನಂದೀಶ್, ಜೆಡಿಎಸ್ ಎಸ್.ಸಿ ಘಟಕದ ತಾಲೂಕು ಅಧ್ಯಕ್ಷ ಹರಿಹರಪುರ ನರಸಿಂಹ ಸೇರಿ ನೂರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದರು.