ಹಳಿಯಾಳ: ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸರ್ಕಾರದ ನೌಕರರಾಗಿದ್ದು, ಅವರ ಸೇವೆಗೆ ಸಂಬಳ ಪಡೆಯುತ್ತಾರೆ,ಆದರೆ ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿ ಸರ್ಕಾರ ರಚಿಸಿ ಸೇವೆ ಮಾಡುತ್ತಾರೆ ಹೀಗಿರುವಾಗ ಜನಪ್ರತಿನಿಧಿಗಳ ಗಮನಕ್ಕೆ ತರದೇ ಅಧಿಕಾರಿಗಳು ಯಾವುದೇ ಯೋಜನೆ ಜಾರಿಗೊಳಿಸಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಎಚ್ಚರಿಸಿದ್ದಾರೆ.
ಜನಪ್ರತಿನಿಧಿಗಳು ಸಹ ತಮ್ಮ ಅಧಿಕಾರವನ್ನು ಅಧಿಕಾರಿಗಳ ಕೈಯಲ್ಲಿ ಕೊಡಬಾರದು, ಅಧಿಕಾರಿಗಳಿಗೆ ಗೌರವ ಕೊಡಿ ಆದರೇ ಅಧಿಕಾರಿಗಳ ಗುಲಾಮರಾಗಬೇಡಿ ಎಂದು ತಾಕೀತು ಮಾಡಿದರು. ಅಧಿಕಾರಿಗಳಾಗಲಿ ಅಥವಾ ಸಿಬ್ಬಂದಿಗಳಾಗಲಿ ಸರ್ಕಾರದ ಯೋಜನೆಗಳನ್ನು ಅಥವಾ ಹಕ್ಕುಪತ್ರಗಳನ್ನಾಗಲಿ ಜನಪ್ರತಿನಿಧಿಗಳ ಉಪಸ್ಥಿತಿಯಿಲ್ಲದೇ ನೇರವಾಗಿ ವಿತರಣೆ ಮಾಡಕೊಡದು ಎಂದರು.
ಜನಸೇವೆಗಾಗಿ ಅಧಿಕಾರ:ಜನ ನೀಡಿದ ಅಧಿಕಾರ ಜನಪ್ರತಿನಿಧಿಗಳು ಜನಸೇವೆಗಾಗಿ ಬಳಸಬೇಕು ಎಂದು ಹೇಳಿದ ದೇಶಪಾಂಡೆ ನನ್ನ ಅನುಭವದಿಂದ ವ್ಯವಹಾರಿಕವಾಗಿ ನಾನು ಸತ್ಯವನ್ನೇ ನುಡಿಯುತ್ತಿದ್ದೆನೆ ಎಂದರು.
ಕಂದಾಯ ಗ್ರಾಮದ ನಿವಾಸಿಗಳಿಗೆ ಸರ್ಕಾರ ಉಚಿತವಾಗಿ ಹಕ್ಕುಪತ್ರ ನೀಡಿದ್ದು, ಅದಕ್ಕಾಗಿ ಯಾರೋಬ್ಬರು ಯಾರಿಗೆ ಹಣ ನೀಡಬಾರದು ಎಂದರು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಯುವಕರು ಬರಬೇಕು, ಒಳ್ಳೆಯ ಜನಪ್ರತಿನಿಧಿಗಳಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳಿಸಬೇಕು ಎಂದು ದೇಶಪಾಂಡೆ ಕರೆನೀಡಿದರು.ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಜನಪರವಾದ ಆಡಳಿತ ನಡೆಸುತ್ತಿದ್ದು, ಪಂಚ ಗ್ಯಾರಂಟಿಗಳ ಮೂಲಕ ಬಡವರ, ಶೋಷಿತರ, ಮಹಿಳೆಯರ, ಯುವಕರ ಪರವಾಗಿ ಸರ್ಕಾರವಿದೆ ಎಂದು ಸಾಬೀತು ಪಡಿಸಿದೆ ಎಂದರು.
1983ರಿಂದ ನಾನು ನಿಮ್ಮ ಆಶೀರ್ವಾದದಿಂದ ಶಾಸಕನಾಗಿ ನಿಮ್ಮ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಪ್ರಾಮಾಣಿಕವಾಗಿ ನಿಮ್ಮ ಸೇವೆ ಸಲ್ಲಿಸುತ್ತಿದ್ದೆನೆ ಎಂದರು. ಸರ್ಕಾರದ ಎಲ್ಲ ಯೋಜನೆಗಳನ್ನು ನನ್ನ ಕ್ಷೇತ್ರದಲ್ಲಿ ಜಾರಿಗೊಳಿಸಿದ್ದೇನೆ, ಯೋಜನೆಗಳ ಸದುಪಯೋಗ ಪಡೆದುಕೊಂಡು ಚುನಾವಣೆಯಲ್ಲಿ ಬೇರೆಯವರನ್ನು ಬೆಂಬಲಿಸುವ ಪ್ರವೃತ್ತಿ ನೋಡಿ ನೋವಾಗುತ್ತದೆ ಎಂದರು.ವಿತರಣೆ:
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ ಎರಡೂ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಡಿಜಿಟಲ್ ಹಕ್ಕು ಪತ್ರ, ಕೃಷಿ ಇಲಾಖೆಯಿಂದ ಸಾಂಕೇತಿಕವಾಗಿ 6 ಫಲಾನುಭವಿಗಳಿಗೆ ಮೆಕ್ಕೆಜೋಳ ಮತ್ತು ಭತ್ತದ ಬೀಜ,ಕಾರ್ಮಿಕ ಇಲಾಖೆಯಿಂದ 20 ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕಿಟ್ ಹಾಗೂ ಪಶು ಸಂಗೋಪನಾ ಇಲಾಖೆಯಿಂದ 5 ಫಲಾನುಭವಿಗಳಿಗೆ ಮೇವಿನ ಬೀಜ,ಮೀನುಗಾರಿಕಾ ಇಲಾಖೆಯಿಂದ 5 ಫಲಾನುಭವಿಗಳಿಗೆ ಮೀನು ಹಿಡಿಯುವ ಬಲೆಯನ್ನು ಶಾಸಕರು ವಿತರಿಸಿದರು.ತಾಪಂ ಇಒ ವಿಲಾಸರಾಜ್,ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಸ್ಥಾಯಿ ಸಮಿತಿ ಚೇರಮನ್ ಅನಿಲ ಚವ್ಹಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಇದ್ದರು. ಕಂದಾಯ ಇಲಾಖೆಯ ಕಿರಣ ಜಕ್ಕಲಿ ಕಾರ್ಯಕ್ರಮ ನಿರ್ವಹಿಸಿದರು.