ಕಾರವಾರ: ಅಂತೂ ಇಂತೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಬಿಜೆಪಿಗೆ ಇದು ಅನಿವಾರ್ಯ ಆಗಿತ್ತು. ಹೆಬ್ಬಾರ್ ಅವರಿಗೆ ಬಯಸಿ ಬಂದ ಭಾಗ್ಯ ಆಗಿತ್ತು.
ಚುನಾವಣೆಯಲ್ಲಿ ಬಿಜೆಪಿ ಮುಖಂಡರು ತಮ್ಮ ವಿರುದ್ಧ ಕೆಲಸ ಮಾಡಿದರು ಎಂಬ ಆರೋಪ ಮಾಡಿದ ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ದೂರವಾಗತೊಡಗಿದರಲ್ಲದೆ, ಕಾಂಗ್ರೆಸ್ ಗೆ ಹತ್ತಿರವಾದರು. ಹೆಬ್ಬಾರ್ ಆರೋಪದ ಮೇಲೆ ಕೆಲವರನ್ನು ಹುದ್ದೆಯಿಂದ ಬಿಜೆಪಿ ಬಿಡುಗಡೆಗೊಳಿಸಿತಾದರೂ ಹೆಬ್ಬಾರ್ ಕಾಂಗ್ರೆಸ್ ನತ್ತಲೇ ಮುಖ ಮಾಡಿದ್ದರಿಂದ ಹುದ್ದೆಯಿಂದ ಅಮಾನತುಗೊಂಡವರಿಗೆ ಮತ್ತೆ ಮಣೆ ಹಾಕಿತು.
ಅದಾದ ನಂತರ ಯಾವ ಹಂತದಲ್ಲೂ ಬಿಜೆಪಿಯತ್ತ ಶಿವರಾಮ ಹೆಬ್ಬಾರ್ ಅವರ ಒಲವು ಕಾಣಿಸಲೇ ಇಲ್ಲ. ವಿಧಾನಸೌಧದಲ್ಲಿ ಬಿಜೆಪಿ ವಿಪ್ ನೀಡಿದರೆ ಅನಾರೋಗ್ಯದ ಕಾರಣ ನೀಡಿ ಮತದಾನದಲ್ಲಿ ಭಾಗವಹಿಸಲಿಲ್ಲ.ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸುವ ಧೈರ್ಯಕ್ಕೆ ಶಿವರಾಮ ಹೆಬ್ಬಾರ್ ಮುಂದಾಗದೆ ಬಿಜೆಪಿಯವರೇ ಉಚ್ಛಾಟನೆ ಮಾಡಲಿ ಆಗ ಶಾಸಕ ಸ್ಥಾನ ಉಳಿಸಿಕೊಂಡು ಕಾಂಗ್ರೆಸ್ ಗೆ ಹತ್ತಿರವಾಗಿ ಇರಬಹುದು ಎಂಬ ಲೆಕ್ಕಾಚಾರ ಹಾಕಿದರು.
ಈ ನಡುವೆ ಬಸನಗೌಡ ಪಾಟೀಲ್ ಯತ್ನಾಳ ಉಚ್ಛಾಟನೆ ಮಾಡಿದ ತರುವಾಯ ಹೆಬ್ಬಾರ್ ಹಾಗೂ ಸೋಮಶೇಖರ ಅವರ ಉಚ್ಛಾಟನೆ ಮುನ್ನೆಲೆಗೆ ಬಂತು. ಕಾಂಗ್ರೆಸ್ ಪರವಾಗಿ ನಿಂತು ಬಿಜೆಪಿಗೆ ಮುಜುಗರ ಉಂಟುಮಾಡುತ್ತಿದ್ದ ಹೆಬ್ಬಾರ್ ಅವರ ಉಚ್ಛಾಟನೆ ಬಿಜೆಪಿಗೆ ಈಗ ಅನಿವಾರ್ಯವಾಯಿತು. ಅದೀಗ ನೆರವೇರಿದೆ. ಹೆಬ್ಬಾರ್ ಅವರ ಮುಂದಿನ ನಡೆ ಸ್ಪಷ್ಟವಾಗಿದೆ. ಮುಂದಿನ ಚುನಾವಣೆ ವೇಳೆಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿ ಸ್ಪರ್ಧಿಸುವುದು ಖಚಿತವಾಗಿದೆ.
ಭಾರತೀಯ ಜನತಾ ಪಕ್ಷ ಕೈಗೊಂಡ ನಿರ್ಣಯ ಸ್ವಾಗತಿಸುತ್ತೇನೆ. ಸಂತಸವಾಗಿದೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇನೆ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.