ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸಬೇಡಿ

KannadaprabhaNewsNetwork |  
Published : Jul 28, 2026, 01:15 AM IST
 | Kannada Prabha

ಸಾರಾಂಶ

ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ 75 ವರ್ಷಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಆರು ದಿನಗಳ ಯೋನೆಕ್ಸ್-ಸನ್‌ರೈಸ್ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್-11 ಮತ್ತು ಅಂಡರ್-13 ವಿಭಾಗಗಳ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಜಿ.ಬಿ. ಜ್ಯೋತಿಗಣೇಶ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರು ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ 75 ವರ್ಷಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಆರು ದಿನಗಳ ಯೋನೆಕ್ಸ್-ಸನ್‌ರೈಸ್ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್-11 ಮತ್ತು ಅಂಡರ್-13 ವಿಭಾಗಗಳ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಜಿ.ಬಿ. ಜ್ಯೋತಿಗಣೇಶ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರು ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಸ್ವಾಮೀಜಿ, ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸಬೇಡಿ, ಅವರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹ ನೀಡಬೇಕು. ಇಲ್ಲಿ ಸೇರಿರುವ 11ರಿಂದ 13 ವರ್ಷದ ಮಕ್ಕಳ ಮುಖದಲ್ಲಿ ಉತ್ಸಾಹದ ಚಿಲುಮೆ ಉಕ್ಕುತ್ತಿದೆ. ಇಂತಹ ಮಕ್ಕಳಿಗೆ ಸರಿಯಾದ ತರಬೇತಿ ನೀಡಿದರೆ ಅವರು ದೊಡ್ಡ ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ ಎಂದರು.

ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸೋತವರು ಕುಗ್ಗುವುದು, ಗೆದ್ದವರು ಹಿಗ್ಗುವುದು ಬೇಡ. ಸೋತವರು ಮತ್ತಷ್ಟು ತಯಾರಿ ಮಾಡಿಕೊಂಡು ಗೆಲುವು ಪಡೆಯಲು ಪ್ರಯತ್ನಿಸಬೇಕು. ಗೆದ್ದವರು ಮತ್ತೊಂದು ಸ್ಪರ್ಧೆಯ ಗೆಲುವಿನತ್ತ ಗಮನಹರಿಸಬೇಕು. ಶ್ರದ್ಧೆ, ಆತ್ಮವಿಶ್ವಾಸ, ತಯಾರಿಯೊಂದಿಗೆ ಸಾಧನೆ ಮಾಡಬಹುದು. ಕ್ರೀಡೆಯಲ್ಲಿ ಎತ್ತರಕ್ಕೆ ಏರಿ ದೇಶದ ಘನತೆಯನ್ನು ಎತ್ತಿಹಿಡಿಯಬೇಕು ಎಂದು ಹೇಳಿದರು.

ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ, ರಾಜಕೀಯ ಕ್ಷೇತ್ರಕ್ಕಿಂಥಾ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಕೊಂಡಿದ್ದಾರೆ. ನಮ್ಮ ಕ್ರೀಡಾಪಟುಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಯಾರು ಮಾಡುವ ಕಾಳಜಿ ಹೊಂದಿರುವುದು ಶ್ಲಾಘನೀಯ. ಯಲಹಂಕ ಬಳಿ ಸರ್ಕಾರದಿಂದ 40 ಎಕರೆ ಜಮೀನು ಪಡೆದು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಹೊರಟಿದ್ದಾರೆ. ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ತರಬೇತಿ ನೀಡಿ ಹೊಸ ಕ್ರೀಡಾಪ್ರತಿಭೆಗಳು ಬೆಳಕಿಗೆ ಬರಲು ನೆರವಾಗಲಿ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಗರ ಕ್ರೀಡಾಪುಟಗಳು, ಕ್ರೀಡಾಪ್ರೇಮಿಗಳಿಗೆ ಹೆಸರಾಗಿದೆ. ದೊಡ್ಡ ಮಟ್ಟದ ಹಲವಾರು ಪಂದ್ಯಾವಳಿಗಳು ನಡೆದಿವೆ. ಈ ಬಾರಿ ರಾಜ್ಯಮಟ್ಟದ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿ ನಡೆಯುತ್ತಿರುವುದು ಅಭಿಮಾನದ ವಿಚಾರ. ಈ ಪಂದ್ಯಾವಳಿ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಬ್ಯಾಡ್ಮಿಂಟರ್ ಪಟುಗಳು ಹೊರಹೊಮ್ಮಲಿ. ನಗರದ ಕ್ರೀಡಾಪ್ರೇಮಿಗಳು ಆರು ದಿನಗಳ ಕಾಲ ನಡೆಯುವ ಪಂದ್ಯಾವಳಿ ವೀಕ್ಷಿಸಿ ಸಂಭ್ರಮಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ. ಮುರಳಿಧರ್, ಖಜಾಂಚಿ ನಿಶ್ಚಿತಾ, ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ ಅಧ್ಯಕ್ಷ ಪಿ. ಪ್ರವೀಣ್, ಗೌರವ ಕಾರ್ಯದರ್ಶಿ ವಿ. ಮುರಳಿಧರ್, ಸಂಯೋಜಕರಾದ ನಿಶಾಂತ್, ಗುರುಪ್ರಸಾದ್, ಅಜಯ್‌ಕುಮಾರ್, ಎಂ. ನಾಗರಾಜು, ಟಿ.ವಿ. ವೆಂಕಟಸ್ವಾಮಿ, ಊರುಕೆರೆ ಪುರುಷೋತ್ತಮ್, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಎ.ಎನ್. ಪ್ರಭಾಕರ್ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗನವಾಡಿ ಕಾರ್ಯಕರ್ತೆ ನೇಮಿಸಿಸಲು ಪೋಷಕರ ಒತ್ತಾಯ
೩೦-೩೧ ರಂದು ವಿಸ್ಮಯ ಕೀಟ ಪ್ರಪಂಚ ಪ್ರದರ್ಶನ