ಹೊಸದುರ್ಗ ಪಟ್ಟಣದ ತಾಪಂ ಸಭಾಂಗಣಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಅಧ್ಯಕ್ಷತೆಯಲ್ಲಿ ನೀರು ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆಯಾದರೆ ಅಲ್ಲಿನ ಪಿಡಿಒ, ಆಡಳಿತಾಧಿಕಾರಿ ಹಾಗೂ ಸಂಬಂದಿಸಿದ ಎಂಜಿನಿಯರ್‌ಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ತಾಲೂಕಿನ ಎಲ್ಲಾ 33 ಗ್ರಾಮ ಪಂಚಾಯತಿಯ ಆಡಳಿತಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕರೆಯಲಾಗಿದ್ದ ಕುಡಿಯುವ ನೀರು ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ಕೆಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ವಹಣೆ ಮಾಡಲು ಖಾಸಗಿಯವರಿಗೆ ನೀಡಲಾಗಿದೆ. ಸರ್ಕಾರದ ವ್ಯವಸ್ಥೆಯಲ್ಲಿ ಖಾಸಗಿವರಿಗೆ ಲಾಭ ಮಾಡಿಕೊಳ್ಳಲು ಕೊಟ್ಟಿದ್ದೀರಾ, ನಿಮಗೆ ಅದನ್ನು ನಿರ್ವಹಣೆ ಮಾಡಲು ಏಕೆ ಆಗಲ್ಲ ಎಂದು ಪ್ರಶ್ನಿಸಿದ ಶಾಸಕರು ಇನ್ನು ಮುಂದೆ ಯಾವುದೇ ನೀರಿನ ಘಟಕಗಳನ್ನು ಖಾಸಗಿಯವರಿಗೆ ನೀಡಿದಂತೆ ತಾಕೀತು ಮಾಡಿದರು.
*ಹೊಸ ಆರ್‌ಒ ಘಟಕ ನೀಡಲ್ಲ:
ಸದ್ಯದಲ್ಲಿಯೇ ಭದ್ರಾ ಜಲಾಶಯದಿಂದ ಶುದ್ಧ ಕುಡಿಯುವ ನೀರು ಸರಬರಾಜು ಆಗಲಿದ್ದು ಹಾಗಾಗಿ ಇನ್ನು ಮುಂದೆ ಯಾವುದೇ ಹೊಸ ಶುದ್ಧ ನೀರಿನ ಘಟಕಗಳನ್ನು ನೀಡುವುದಿಲ್ಲ ಈಗಿರುವ ಘಟಕಗಳನ್ನೆ ಸರಿಯಾಗಿ ನಿರ್ವಹಣೆ ಮಾಡಿಕೊಂಡು ಜನರಿಗೆ ನೀರು ಕೊಡಿ ಎಂದರು.
*ಸಹಿಗೆ ಸೀಮಿತವಾಗಬೇಡಿ:
ಆಡಳಿತಾಧಿಕಾರಿಗಳು ಕೇವಲ ಕಡತಗಳಿಗೆ, ಬಿಲ್ಲುಗಳಿಗೆ ಸಹಿ ಹಾಕುವುದಕ್ಕೆ ಸೀಮಿತವಾಗಬೇಡಿ. ಸಮಸ್ಯೆ ಹೇಳಿಕೊಂಡು ಯಾರೂ ನಿಮ್ಮ ಬಳಿ ಬರಲ್ಲ ನೀವು ಜನರ ಬಳಿಗೆ ಹೋದರೆ ಸಮಸ್ಯೆ ಗೊತ್ತಾಗುತ್ತದೆ. ಸಮಸ್ಯೆ ಬಂದಾಗ ಸರಿ ಪಡಿಸುವುದಲ್ಲ ಸಮಸ್ಯೆ ಬರದಂತೆ ನೀವೇ ಗಮನ ನೀಡಿ ಜನರಿಗೆ ಕುಡಿಯುವ ನೀರು, ಚರಂಡಿ ಸ್ವಚ್ಚತೆ., ಬೀದಿ ದೀಪಗಳ ಅಳವಡಿಗೆ ಬಗ್ಗೆ ಗಮನ ನಿಡಿ ಎಂದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಈಗಾಗಲೇ ಹೈಮಾಸ್ಕ್ ಅಳವಡಿಕೆಗೆ ಹಣ ನೀಡಲಾಗಿದ್ದು ಹೈಮಾಸ್ಕ್ ಇರುವ ಕಡೆಗಳಲ್ಲಿಯೂ ಬೀದಿ ದೀಪಗಳು ಉರಿಯುತ್ತಿವೆ ಇದರಿಂದ ಅನಾವಶ್ಯಕ ವಿದ್ಯುತ್ ಬಳಕೆಯಾಗುತ್ತದೆ ಅಂತಹ ಬೀದಿ ದೀಪಗಳನ್ನು ಇಲ್ಲದ ಭಾಗಗಳಿಗೆ ಅಳವಡಿಸಿ ಎಂದು ಪಿಡಿಒಗಳಿಗೆ ಸೂಚಿಸಿ ಈ ಬಗ್ಗೆ ಅವರಿಗೆ ಸಹಕರಿಸುವಂತೆ ಬೆಸ್ಕಾಂ ಎಇಇಗಳಿಗೆ ಸೂಚಿಸಿದರು.
*15ನೇ ಹಣಕಾಸು ಅನುದಾನ ಕೊಡಿಸಿ:
ಸಭೆಯಲ್ಲಿ ದೇವಪುರ ಗ್ರಾಪಂನ ಪಿಡಿಒ ನಯಾಸ್
15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಯಾಗಿಲ್ಲ ಇದರಿಂದ ಗ್ರಾಮಗಳಲ್ಲಿ ಅಬೀವೃದ್ಧಿ ಕೆಲಸ ಮಾಡಲು ತೊಂದರೆಯಾಗುತ್ತಿದೆ ಹಾಗಾಗಿ ಅನುದಾನ ಕೊಡಿಸಿ ಎಂದು ಶಾಸಕರಿಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಆರ್ ಡಿಪಿಆರ್ ಇಲಾಕೆಗೆ ಹೊಸ ಸಚಿವರು ಬಂದಿದ್ದಾರೆ . ಅವರು ಅದನ್ನು ಕೊಡುತ್ತಾರೆ ನೀನು ಮೊದಲು ಗ್ರಾಮಕ್ಕೆ ಹೋಗಿ ಸರಿಯಾಗಿ ಕೆಲಸ ಮಾಡು ಎಂದು ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ತಿರುಪತಿ ಪಾಟೀಲ್, ತಾಪಂ ವ್ಯವಸ್ಥಾಪಕ ಕರಿಯಪ್ಪ ಸೇರಿದಂತೆ 33 ಗ್ರಾಪಂ ಗಳ ಆಡಳಿತಾದಿಕಾರಿಗಳು, ಪಿಡಿಓಗಳು ಹಾಗೂ ನೀರು ಸರಬರಾಜು ಇಲಾಕೆ ಇಂಜಿನಿಯರ್‌ಗಳು ಹಾಜರಿದ್ದರು.ಇ-ಸ್ವತ್ತು ಕೊಡಲು ತಾಂತ್ರಿಕ ಸಮಸ್ಯೆ
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪಿಡಿಒಗಳ ಸಭೆಯಲ್ಲಿ ಇ-ಸ್ವತ್ತು ವಿತರಣೆಯ ತಾಂತ್ರಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಗ್ರಾಮಠಾಣಾ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ನೀಡಲು ಆಸ್ತಿ ನೋಂದಣಿ ದಾಖಲೆ ಹಾಗೂ ಇಸಿ ಕಡ್ಡಾಯಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪಿಡಿಓಗಳು ತಿಳಿಸಿದರು. ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ಮನೆಗಳು ಹಾಗೂ ನಿವೇಶನಗಳಿಗೂ ನಿಯಮಗಳ ಕಾರಣ ಇ-ಸ್ವತ್ತು ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ತಿರುಪತಿ ಪಾಟೀಲ್, ಕಂದಾಯ ಭೂಮಿಗೆ 94 ಸಿಸಿ ಅಡಿಯಲ್ಲಿ ಪರಿವರ್ತನೆ ಅಗತ್ಯ ಆದರೆ ಈಗ ಅದನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಶಾಸಕರು ಪ್ರತಿಕ್ರಯಿಸಿ ಸಮಸ್ಯೆ ಪರಿಹಾರಕ್ಕಾಗಿ ಪಿಡಿಓ ಸಂಘವು ಸರ್ಕಾರಕ್ಕೆ ಮನವಿ ಸಲ್ಲಿಸಲು ಪತ್ರ ಸಿದ್ಧಪಡಿಸಿಕೊಡಿ ಜನರಿಗೆ ಕಾರಣ ಹೇಳುವುದಕ್ಕಿಂತ ಪರಿಹಾರ ಕಂಡುಕೊಳ್ಳುವತ್ತ ಕ್ರಮ ಕೈಗೊಳ್ಳೋಣ ಎಂದು ಸೂಚಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.