ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಮೈಸೂರಿಂದ ಬಂಡೀಪುರಕ್ಕೆ ಸಚಿವ ಈಶ್ವರ್ ಖಂಡ್ರೆ ತಾಲೂಕಿನ ಬೇಗೂರಿನ ಬಸ್ ನಿಲ್ದಾಣದ ಬಳಿ ರೈತ ಸಂಘದ ವಾಸುದೇವ ಮೇಟಿ ಬಣದ ರೈತ ಸಂಘ, ಗುಂಡ್ಲುಪೇಟೆ ತಾಲೂಕು ಕಚೇರಿ ಆವರಣದಲ್ಲಿ ಕಳೆದ ೧೪ ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿರುರುವ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘ, ತಾಲೂಕು ಕಚೇರಿ ದ್ವಾರದ ಬಳಿಕ ಮತ್ತೊಂದು ಬಣದ ರೈತಸಂಘ, ಮೇಲುಕಾಮನಹಳ್ಳಿ ಬಂಡೀಪುರ ಸಫಾರಿ ಕೇಂದ್ರದ ಬಳಿಯ ಅರಣ್ಯ ಕಚೇರಿ ಆವರಣದಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘದ ಕಾರ್ಯಕರ್ತರ ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತಸಂಘದ ಮುಖಂಡರ ಮನವಿ ಆಲಿಸಿದರು.
ರೈತರ ಬೇಡಿಕೆಗಳೇನು?:ಕಾಡು ಪ್ರಾಣಿಗಳ ಹಾವಳಿ, ಸಾಗುವಳಿ ಚೀಟಿ ನೀಡಲು ಅರಣ್ಯ ಇಲಾಖೆ ಎನ್‌ಒಸಿ ನೀಡದಿರುವುದು, ಸಫಾರಿ ಬಂದ್ ಮಾಡಬೇಕು. ಗೋಪಾಲಸ್ವಾಮಿ ಬೆಟ್ಟ ಹಾಗೂ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಮುಕ್ತ ಅವಕಾಶ ನೀಡಬೇಕು. ಕೆರೆಗಳಿಗೆ ನೀರು ತುಂಬಿಸಬೇಕು. ಪರಿಹಾರದ ಬದಲು, ಬೆಳೆ ನಷ್ಟ ತುಂಬಿಕೊಡಬೇಕು. ಮಹದೇಶ್ವರ ವನ್ಯಧಾಮವನ್ನು ಹುಲಿ ಧಾಮವಾಗಿ ಮಾಡಬಾರದು. ಜನರು ಮೃತಪಟ್ಟರೆ ಹೆಚ್ಚಿನ ಪರಿಹಾರ ನೀಡಬೇಕು ಎಂಬ ಬೇಡಿಕೆ ಈಡೇರಿಸಬೇಕು ಎಂದು ನಾಲ್ಕು ಬಣದ ರೈತ ಸಂಘದ ಮುಖಂಡರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಪ್ರತಿಭಟನೆಗೂ ಮುನ್ನವೇ ಬಿಜೆಪಿ ಮುಖಂಡರ ಬಂಧನ:
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದ ಮುಂದೆ ಅರಣ್ಯ ಸಚಿವರಿಗೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಮಂಡಲ ಬಿಜೆಪಿ ಅಧ್ಯಕ್ಷ ಮಹದೇವಪ್ರಸಾದ್ ಸೇರಿದಂತೆ ಕೆಲ ಬಿಜೆಪಿ ಪ್ರಮುಖರು ಮುಂದಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನೆಗೆ ಅವಕಾಶ ನೀಡಲು ಆಗುವುದಿಲ್ಲ ಎಂದು ಹೇಳಿದರೂ ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಮಂಡಲ ಬಿಜೆಪಿ ಅಧ್ಯಕ್ಷ ಮಹದೇವಪ್ರಸಾದ್, ಗ್ರಾಪಂ ಅಧ್ಯಕ್ಷ ನಂಜಪ್ಪ, ಬಿಜೆಪಿ ಮುಖಂಡರಾದ ಪ್ರಣಯ್, ಶಿವಪುರ ಮಂಜು, ಹಂಗಳ ರಾಜಪ್ಪ, ಗರಗನಹಳ್ಳಿ ಮಹೇಂದ್ರ, ಬೊಮ್ಮನಹಳ್ಳಿ ವಿಜಿ, ಸಂತು, ಮಡಹಳ್ಳಿ ಜಗ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು.