ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಥಾಪನೆಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯ ಕಾಲ ಉತ್ತಮವಾಗಿರಬೇಕಾದರೆ ಪರಿಸರ ಸಹ ಉಳಿಯಬೇಕು. ಎಲ್ಲರಿಗೂ ಪರಿಶುದ್ಧವಾದ ಗಾಳಿ ಮತ್ತು ನೀರು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲಸ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಎಲ್ಲರಿಗೂ ಅರಿವಾಗಿದೆ. ಇದರಿಂದ ಪಾಠ ಕಲಿತು ಆಮ್ಲಜನಕವನ್ನು ಕಾಪಾಡಿಕೊಳ್ಳಬೇಕಿದೆ. ಭೂಮಿ ಮತ್ತು ಅಂತರ್ಜಲಕ್ಕೆ ಮಾರಕವಾಗುತ್ತಿರುವ ರಾಸಾಯನಿಕ ವಸ್ತುಗಳ ಬಗ್ಗೆಯು ಅರಿವು ಉಂಟಾಗ ಬೇಕಿದೆ ಎಂದರು.ಕಾರ್ಖಾನೆ, ಉದ್ಯಮಗಳು ಉದ್ಯೋಗಕ್ಕೆ ಬೇಕು. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆ.ಐ.ಎ.ಡಿ.ಬಿ) ಮಂಡಳಿಯಿಂದ ಇಂದು ಸಾಕಷ್ಟು ಕೈಗಾರಿಕೆಗಳು ಬಂದಿವೆ. ಕಾರ್ಖಾನೆಗಳಿಂದ ಹೊರಸೂಸುವ ಮಾಲಿನ್ಯದ ಬಗ್ಗೆಯೂ ಎಚ್ಚರವಿರಬೇಕು. ಮುಂಜಾಗ್ರತಾ ಕ್ರಮಗಳು ಇರಬೇಕು ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಜೀವಿ ವಲಯ ಅಭರಣ್ಯ, ಶ್ರೀ ಮಲೈ ಮಹದೇಶ್ವರ ವನ್ಯಜೀವಿ ಅಭಯ ಅರಣ್ಯ ಮತ್ತು ಬಿ.ಆರ್.ಟಿ ಸೂಕ್ಷ್ಮ ಪರಿಸರ ವಲಯಗಳಿವೆ. ಇಲ್ಲಿನ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಿರಂತರವಾಗಿ ಜಲ, ವಾಯು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಜಾಗೃತಿ ಮೂಡಿಸಲಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಹನೂರು ತಾಲೂಕಿನ ಶ್ರೀ ಮಲೈಮಹದೇಶ್ವರ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲು ಎಲ್ಲ ನೆರವು ನೀಡಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಎಸ್.ಐ.ಎಲ್. ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು, ನದಿಗಳು ಕಲುಷಿತವಾಗಲು, ಪರಿಸರ ಮಾಲಿನ್ಯಗೊಳ್ಳಲು ಎಲ್ಲರೂ ಕಾರಣರಾಗುತ್ತಿದ್ದೇವೆ. ಶುದ್ದ ಗಾಳಿ, ನೀರು ಮುಂದಿನ ದಿನಗಳಲ್ಲಿಯೂ ಸಿಗಬೇಕಾದರೆ ಪರಿಸರ ಸಂರಕ್ಷಣೆ ಮಾಡುವತ್ತ ಎಲ್ಲರು ಗಮನಹರಿಸಬೇಕಿದೆ. ಗಿಡ ಮರಗಳನ್ನು ಬೆಳೆಸಿ ಪೋಷಿಸಬೇಕಿದೆ ಎಂದರು.
ಇದೇ ವೇಳೆ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿ ಶ್ರಮಿಸುತ್ತಿರುವ ಸೋಲಿಗ ಬುಡಕಟ್ಟು ಸಮುದಾಯದೊಂದಿಗೆ ಸಾಂಪ್ರದಾಯಿಕ ಜ್ಞಾನ ಸಮೃದ್ದಗೊಳಿಸಿದ ಏಟ್ರಿ ಸಂಸ್ಥೆಯ ಡಾ. ಸಿದ್ದಪ್ಪ ಶೆಟ್ಟಿ, ಕೊಳ್ಳೇಗಾಲದಲ್ಲಿ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಂಗಜೋಳಿಗೆ ಸಂಸ್ಥಾಪಕರಾದ ಮುಡಿಗುಂಡ ಜಿ. ಮೂರ್ತಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಉಪಯೋಗಿಸದಂತೆ ಅರಿವು ಮೂಡಿಸಿರುವ ಇಕೋ ವೈಲ್ಡ್ ಫೌಂಡೇಶನ್ ನ ಭರತ್ ಮಹದೇವ್ ಅವರಿಗೆ ಇಂದಿರ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುವರ್ಣ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ತನುಷ್ಕಾ, ಚೇತನ್ ಗೌಡ, ಸೆರುಸಿನ್ ಜಾನ್, ಮಹಾಲಕ್ಷ್ಮಿ, ಅಮುದ. ಎಸ್, ರೋಹಿತ್. ಬಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಆಶಾ.ಎ, ತನ್ಮಯ್ ಶ್ರೀಕಾಂತ್, ಚೆರೀಶ್ ಎಂ., ಅನುಷಾ. ಸಿ.ಎಂ, ಆಯೇಷಾ ಅವರನ್ನು ಸಹ ಗೌರವಿಸಲಾಯಿತು.