ಕನ್ನಡಪ್ರಭ ವಾರ್ತೆ ರಾಮನಗರ
ಇದು ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಕಳೆದ 500 ದಿನಗಳಿಂದ ರೈತರು ಚಳವಳಿ ನಡೆಸುತ್ತಿರುವ ಬೈರಮಂಗಲ ವೃತ್ತದಲ್ಲಿ ಗುರುವಾರ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಸಹಯೋಗದೊಂದಿಗೆ ಆಯೋಜಿಸಿದ್ದ ಸಾರ್ವಜನಿಕರ ವಿಚಾರಣೆ (ಪಬ್ಲಿಕ್ ಹಿಯರಿಂಗ್)ಯ ಕಟಕಟೆಯಲ್ಲಿ ನಿಂತ ಅನ್ನದಾತರಿಂದ ವ್ಯಕ್ತವಾದ ನೋವಿನ ನುಡಿಗಳು.
ಕಂಚುಗಾರನಹಳ್ಳಿ ರೈತ ಮಹಿಳೆ ಸುಮಾ, ಫಲವತ್ತಾದ - ನೀರಾವರಿ ಕೃಷಿ ಭೂಮಿಯನ್ನು ನಂಬಿ ಸಣ್ಣ ಹಿಡುವಳಿದಾರರು ಜೀವನ ಕಟ್ಟಿಕೊಂಡ್ದಿದ್ದಾರೆ. ಅವರನ್ನು ಬದುಕಿಸಿಕೊಡಿ ಎಂದು ಮನವಿ ಮಾಡಿದರೆ, ಕಂಚುಗಾರನಹಳ್ಳಿ ಗುಂಡುತೋಪು ಮುತ್ತುರಾಜ್ ರವರು, ಭೂಮಿ ತಾಯಿ ನಂಬಿ ಜೀವನ ಮಾಡುತ್ತಿದ್ದೇವೆ. ನಮಗೆ ವ್ಯವಸಾಯ ಬಿಟ್ಟು ಬೇರೇನೂ ಗೊತ್ತಿಲ್ಲ. ಭೂಮಿನೇ ಇಲ್ಲದಿದ್ದರೆ ಜೀವನ ನಡೆಸುವುದು ಹೇಗೆಂದು ಪ್ರಶ್ನೆ ಮಾಡಿದರು.ಕೃಷಿಯಿಂದ ₹60 ಸಾವಿರ ಸಂಪಾದನೆ ಮಾಡುತ್ತಿದ್ದೇನೆ. ಭೂ ಸ್ವಾಧೀನ ಮಾಡಿಕೊಂಡರೆ ಎಷ್ಟು ಹಣ ಬರುತ್ತದೆ. ಆ ಹಣ ಎಷ್ಟು ದಿನ ಇರುತ್ತದೆ. ಅದರಿಂದ ನನ್ನ ಬದುಕು ಕಟ್ಟಿಕೊಳ್ಳಲು ಆಗಲ್ಲ. ಅಲ್ಲಿ ನಮ್ಮ ಪೂರ್ವಜರ ಸಮಾಧಿಗಳಿದ್ದು, ಅದರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಸ್ವಾಧೀನದ ಹೆಸರಿನಲ್ಲಿ ಅವುಗಳಿಗೆ ಧಕ್ಕೆ ತಂದರೆ ನೋವಾಗುತ್ತದೆ ಎಂದು ಕೆಂಪಶೆಟ್ಟಿದೊಡ್ಡಿ ಮಂಜುನಾಥ್ ನೊಂದು ನುಡಿದರು.
ಸಿದ್ದಯ್ಯನದೊಡ್ಡಿ ಶಾಂಭವಿ ಮಾತನಾಡಿ, ಭೂಮಿ ರೈತರ ಪಾಲಿಗೆ ಸ್ವಾವಲಂಬನೆಯ ಪ್ರತೀಕ. ಅದಿದ್ದರೆ ಮಾತ್ರ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯ. ಸತ್ತಾಗ ನಮ್ಮನ್ನು ಹೂಳಲು ಭೂಮಿ ಬೇಡವೇ, ಭೂಮಿನೇ ಇಲ್ಲದಿದ್ದರೆ ನನ್ನ ಮಗನ ನರ್ಸರಿ ಕನಸು ಸಾಕಾರಗೊಳಿಸುವುದು ಹೇಗೆಂದು ಕೇಳಿದರು.
ನಂಜೇಗೌಡನದೊಡ್ಡಿ ನಾಗರಾಜ್ ಮಾತನಾಡಿ, ಭೂ ಸ್ವಾಧೀನದ ಬೂತ ರೈತರನ್ನು ಅತಂತ್ರರನ್ನಾಗಿ ಮಾಡಿದ್ದು, ಹಣದ ದಾಹ ತೋರಿಸಿ ಬಾಂಧವ್ಯದಲ್ಲಿ ಬಿರುಕು ಮೂಡಿಸಲಾಗುತ್ತಿದೆ. ದಪ್ಪಚರ್ಮದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪಂಚೇಂದ್ರಿಯಗಳನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಈ ಭೂಮಿನ ನಂಬಿಕೊಂಡು ರೈತರು ಮಾತ್ರವಲ್ಲ ಲಕ್ಷಾಂತರ ನವಿಲುಗಳು, ಪ್ರಾಣಿ ಪಕ್ಷಿಗಳು ಇದ್ದಾವೆ. ಮಲೆನಾಡಿನಂತಿರುವ ಈ ಪ್ರದೇಶದಲ್ಲಿ ಕಾಂಕ್ರಿಟ್ ನಾಡು ಕಟ್ಟಿದರೆ ಪ್ರಾಣಿ ಪಕ್ಷಗಳು ಏನಾಗಬೇಕು ಎಂದು ಚಿಕ್ಕಬೈರಮಂಗಲ ನಾಗೇಶ್ ಕುಮಾರ್ ಪ್ರಶ್ನಿಸಿದರು.
26 ಗ್ರಾಮಗಳ ರೈತರು ಕೃಷಿ ಜೊತೆಗೆ ಹೈನುಗಾರಿಕೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಭೂಮಿ ದಾನ ಮಾಡುವಂತೆ ಮುಖ್ಯಮಂತ್ರಿಗಳು ಹೇಳುತ್ತಾರೆ. ಈಗಾಗಲೇ ವೃಷಭಾವತಿ ಕೆರೆಗೆ ಭೂಮಿ ದಾನ ಮಾಡಿದ್ದೇವೆ. ಇನ್ನು ದಾನ ಮಾಡುವಷ್ಟು ದಾನಶೂರತ್ವ ಇಲ್ಲ. ಭೂಮಿ ಬಿಟ್ಟುಕೊಟ್ಟು ರೈತರು ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಡಿ ಎಂದು ಬೈರಮಂಗಲ ಪುರುಷೋತ್ತಮ್ ಮನವಿ ಮಾಡಿದರು.
ಅರ್ಥಶಾಸ್ತ್ರಜ್ಞ ಡಾ.ಪ್ರಕಾಶ್ ಕಮ್ಮರಡಿ, ಸಮಾಜ ಶಾಸ್ತ್ರಜ್ಞೆ ಡಾ.ಎ.ಆರ್.ವಾಸವಿ, ಹಿರಿಯ ಪತ್ರಕರ್ತ ಡಿ.ಉಮಾಪತಿ ಉಪಸ್ಥಿತರಿದ್ದರು.