ಶಿಕ್ಷಣ ಸಚಿವ ಧರ್ಮೇಂದ್ರ ಪ್ರಾಧಾನ್ ರಾಜೀನಾಮೆ ನೀಡಬೇಕು: ಜಿಲ್ಲಾ ಕಾಂಗ್ರೆಸ್
ನವದೆಹಲಿಯ ಜಂತರ್ ಮಂತರ್‌ನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹಾಗೂ ಪ್ರತಿಭಟನಾನಿರತ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಾಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದಿಂದ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ವಾಲ್ಮೀಕಿ ವೃತ್ತದಿಂದ ಪ್ರಾರಂಭವಾಗಿ ಎಂಜಿ ರಸ್ತೆ ಮೂಲಕ ಗಾಂಧಿವನದವರಗೆ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರಜಾಪ್ರಭುತ್ವದ ಧ್ವನಿ ಹತ್ತಿಕ್ಕುವ ಪ್ರಯತ್ನ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಅಂಬರೀಶ್ ಮಾತನಾಡಿ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಸಂವಿಧಾನ ನೀಡಿರುವ ಪ್ರತಿಭಟನೆಯ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ವಿರೋಧದ ಧ್ವನಿ ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಾಲೂರು ವೆಂಕಟರಾಮ್, ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಅಬ್ದುಲ್ ಖಯ್ಯಾಮ್, ಮೈಲಾಂಡಹಳ್ಳಿ ಮುರಳಿ, ಕುಡುವನಹಳ್ಳಿ ಆನಂದ್, ಮಾಲೂರು ಅಬ್ಬಯ್ಯಪ್ಪ, ಕಡಗುರು ತಿಮ್ಮರಾಯಪ್ಪ, ಬಂಗಾರಪೇಟೆ ನಾರಾಯಣಸ್ವಾಮಿ, ಅಮರನಾಥ್, ಬಾಲು, ಅಡ್ಡಗಲ್ ನರೇಶ್, ಮುಳಬಾಗಿಲು ಪ್ರಕಾಶ್, ಬೈರಂಡಹಳ್ಳಿ ನಾಗೇಶ್, ಕಲ್ಲಮಂಜಲಿ ದೇವರಾಜ್, ರವಿ, ಕೃಷ್ಣಾಪುರ ನರೇಶ್, ವಕ್ಕಲೇರಿ ನಾಗೇಂದ್ರ, ಬಾಬು, ಚಿನ್ನಾಪುರ ನಾರಾಯಣಸ್ವಾಮಿ, ಮಂಜುನಾಥ್, ಪಿಳ್ಳಪ್ಪ, ಸಂಪತ್ ವಾಸು ಇದ್ದರು.