ಆರೋಗ್ಯಕರ ಜೀವನಕ್ಕೆ ನಿತ್ಯ ಯೋಗ ಮಾಡಿ

KannadaprabhaNewsNetwork |  
Published : Jun 22, 2025, 11:48 PM IST
ಸೋಲೂರಿನ ರಾಜಶೇಖರಯ್ಯ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಶೇಖರಯ್ಯ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. | Kannada Prabha

ಸಾರಾಂಶ

ಮಾಗಡಿ: ಸೋಲೂರಿನ ರಾಜಶೇಖರಯ್ಯ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಆರ್‌ಪಿಎಸ್ ಶಾಲಾ ಆವರಣದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.

ಮಾಗಡಿ: ಸೋಲೂರಿನ ರಾಜಶೇಖರಯ್ಯ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಆರ್‌ಪಿಎಸ್ ಶಾಲಾ ಆವರಣದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸದ್ಗುರು ಆಯುರ್ವೇದ ಸಂಸ್ಥೆ ಮುಖ್ಯಸ್ಥೆ ಡಾ.ಸ್ವಾತಿ ಪ್ರದೀಪ್ ಯೋಗಾಭ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯನಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೋ, ಆಂತರಿಕ ಸೌಂದರ್ಯವು ಅಷ್ಟೇ ಮುಖ್ಯ. ಇವೆರಡನ್ನು ಚೆನ್ನಾಗಿಟ್ಟುಕೊಳ್ಳಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿನಿತ್ಯ ಮನುಷ್ಯ ಯೋಗ ಮಾಡುವುದರಿಂದ ಆರೋಗ್ಯಕರ ಜೀವನ ನಡೆಸಬಹುದಾಗಿದೆ. ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಈ ಆಚರಣೆ ಮಹತ್ವ, ಇತಿಹಾಸದ ಕುರಿತು ಎಲ್ಲರೂ ತಿಳಿಯಬೇಕು ಎಂದು ಹೇಳಿದರು.

ರಾಜಶೇಖರಯ್ಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ನಿಸರ್ಗ ತಜ್ಞ ಡಾ.ಆರ್.ಚೇತನ್ ಕುಮಾರ್ ಮಾತನಾಡಿ, ಯೋಗವೆಂದರೆ ಕೇವಲ ಶರೀರವನ್ನು ವಿವಿಧ ಭಂಗಿಗಳಲ್ಲಿ ತಿರುಗಿಸುವ ಮೂಲಕ ದೈಹಿಕ ಕಸರತ್ತು ನಡೆಸುವ ಕ್ರಿಯೆಯಲ್ಲ. ಯೋಗ ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತಹ ಒಂದು ಮಾರ್ಗದರ್ಶಕವಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಯೋಗ, ಧ್ಯಾನ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳುತ್ತಾರೆ ಎಂದರು. ಜೂನ್ 21ರಂದು ಭೂಮಿಯು ಉತ್ತರಾಯಣದಿಂದ ದಕ್ಷಿಣಾಯಣ ಕಡೆ ಕಾಲವು ಪ್ರಾರಂಭವಾಗುತ್ತದೆ. ಅಂದು ಭೂಮಿಯ ಮೇಲೆ ದೀರ್ಘಕಾಲ ಸೂರ್ಯನ ಬೆಳಕು ಬೀಳುವ ಕಾರಣ ವಿಶ್ವ ಯೋಗ ದಿನ ಆಚರಿಸಲಾಗುತ್ತದೆ ಎಂದರು.

ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರ, ಸರಳ ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ ಪಡೆದರು. ಯೋಗ ಸಮಾವೇಶದಂದು ಹಮ್ಮಿಕೊಂಡಿದ್ದ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಐಶ್ವರ್ಯ ಚೇತನ್, ಆಯುರ್ವೇದ ಕಾಲೇಜಿನ ಡೀನ್ ವಾಣಿಶ್ರೀ, ಎಂಆರ್‌ಆರ್ ನೇಚರ್ ಕ್ಯೂರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕಿರಣ್ ಕುಮಾರ್ ರೆಡ್ಡಿ, ಪ್ರಾಂಶುಪಾಲರಾದ ಸಂಕನಗೌಡ ಪಾಟೀಲ್, ಸುಲೋಚನಾ ಪ್ರದೀಪ್, ಬಸವೇಶ್ವರ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ