ಕನ್ನಡಪ್ರಭ ವಾರ್ತೆ ಬೆಳಗಾವಿ
ಅಪೆಂಡಿಕ್ಸ್ ಆಪರೇಷನ್ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಕರುಳು ಕಟ್ ಮಾಡಿದ್ದರಿಂದ ಯುವಕ ತೀವ್ರ ಹೊಟ್ಟೆ ನೋವಿನಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದು, ನಿರ್ಲಕ್ಷ್ಯ ತೋರಿದ ಬಿಮ್ಸ್ ಆಸ್ಪತ್ರೆ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ದೂರಿದ್ದಾರೆ.ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಸವದತ್ತಿ ತಾಲೂಕಿನ ಇಂಗಳಗಿ ಗ್ರಾಮದ ಮಹೇಶ ಫಕೀರಪ್ಪ ಮಾದರ (22) ಎಂಬ ಯುವಕನನ್ನು ಜೂನ್ 20ರಂದು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿನ ವೈದ್ಯರು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳಿಸಿದ್ದರು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಅದೇ ದಿನ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ನಡೆಸಿದ್ದರು. ಶಸ್ತ್ರಚಿಕಿತ್ಸೆ ಬಳಿಕವೂ ಮಹೇಶಗೆ ಮತ್ತಷ್ಟು ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವು ಕಡಿಮೆ ಆಗದ ಕಾರಣ 32 ದಿನಗಳ ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮತ್ತೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಲು ಸ್ಕ್ಯಾನಿಂಗ್ ಮಾಡಿದ ವೇಳೆ ಕರುಳಿಗೆ ಪಟ್ಟಾಗಿರುವುದು ಬೆಳಕಿಗೆ ಬಂದಿದೆ. ಈ ಅವಾಂತರಕ್ಕೆ ಬಿಮ್ಸ್ ವೈದ್ಯರು ಮತ್ತು ನರ್ಸ್ ಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಚಿಕಿತ್ಸೆಗಾಗಿ ಬಡ ಕುಟುಂಬ ₹10-12ಲಕ್ಷ ಖರ್ಚು ಮಾಡಿದೆ. ಮಹೇಶನ ಶಸ್ತ್ರಚಿಕಿತ್ಸೆಗೆ ಅವರ ತಂದೆ ಫಕೀರಪ್ಪ ಮನೆ ಮಾರಾಟ ಮಾಡಿದ್ದಾರೆ. ಬಿಮ್ಸ್ ವೈದ್ಯರ ವಿರುದ್ಧ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ, ಯುವಕನಿಗೆ ನ್ಯಾಯ ಕೊಡಿಸುವಂತೆ ದಲಿತ ಮುಖಂಡರು ಹಾಗೂ ಕುಟುಂಬಸ್ಥರು ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ಕುರಿತು ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಪ್ರತಿಕ್ರಿಯಿಸಿ, ಮಹೇಶ ಮಾದರ ಎನ್ನುವ ಯುವಕನಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಆಗಿದೆ. ಯುವಕನನ್ನು ಶಸ್ತ್ರಚಿಕಿತ್ಸೆ ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ವೇಳೆ ಯುವಕನ ಕರುಳಿಗೆ ಪೆಟ್ಟಾಗಿರುವುದು ಕಂಡು ಬಂದಿದೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ನಾವು ಡಿಎಸ್ ಹಾಗೂ ಸರ್ಜರಿ ವೈದರ ತನಿಖಾ ತಂಡ ರಚಿಸಿ ತನಿಖೆ ಮಾಡಿಸುತ್ತೇವೆ. ತನಿಖೆಯಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದರೆ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.