ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರ ಮನೆಯಲ್ಲಿಯೇ ಕಳ್ಳರು ತಮ್ಮ ಕೈ ಚಳಕ ತೋರಿಸಿರುವ ಘಟನೆ ಸೋಮವಾರ ಪಟ್ಟಣದ ಹುಡ್ಕೋ ಬಡಾವಣೆಯ 14ನೇ ಕ್ರಾಸ್‌ನಲ್ಲಿ ನಡೆದಿದೆ. 5ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಮನೆಯಲ್ಲಿಯೇ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿರುವ ಶಂಕೆ ವ್ಯಕ್ಯವಾಗಿದೆ.ಮನೆಯಲ್ಲಿ ಯಾರು ಇಲ್ಲದ ವೇಳೆ ರವಿವಾರ ಮಧ್ಯರಾತ್ರಿ ಕಳ್ಳತನ ನಡೆದಿದ್ದು, ಸೋಮವಾರ ಮಧ್ಯಾಹ್ನ ಅಕ್ಕಪಕ್ಕದವರು ನ್ಯಾಯಾಧೀಶರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಕಳ್ಳತನ ನಡೆದಿದ್ದು ಬೆಳೆಕಿಗೆ ಬಂದಿದೆ. ಆದರೆ, ಏನೇನು ಕಳ್ಳತನವಾಗಿದೆ, ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.ನ್ಯಾಯಾಧೀಶರಾದ ಸಚಿನ್ ಕೌಶಿಕ್ ಭಾನುವಾರ ಮುಂಜಾನೆ ಕುಟುಂಬ ಸಮೇತ ಮನೆಗೆ ಬೀಗ ಹಾಕಿ ಕಾರವಾರಕ್ಕೆ ಹೋಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಕಳ್ಳರು ತಮ್ಮ ತಮ್ಮ ಕೈಚಳಕ ತೋರಿಸಿದ್ದಾರೆ. ಮನೆಯ ಬಾಗಿಲಿಗೆ ಹಾಕಿದ್ದ ಬೀಗ ತೆಗೆದು ಮುಂಬಾಗಿಲಿನಿಂದಲೇ ಕಳ್ಳರು ಒಳಗೆ ನುಗ್ಗಿದ್ದಾರೆ. ಮನೆಯಲ್ಲಿ ಬಟ್ಟೆ, ತಿಜೋರಿ, ದೇವರ ಕೋಣೆ ಹೀಗೆ ಒಂದನ್ನೂ ಬಿಡದೆ ಎಲ್ಲ ಜಾಲಾಡಿದ್ದಾರೆ. ಮನೆಯಲ್ಲಿ ಬಟ್ಟೆ ಬರೆ ಇತರೆ ಸಾಮಾನುಗಳಯ ಎಲ್ಲೆಂದರಲ್ಲಿ ಮನಸೋ ಇಚ್ಚೆ ಚಲ್ಲಾಪಿಲ್ಲಿಯಾಗಿ ಬಿಸಾಡಿರುವುದು ಕಂಡುಬಂದಿದೆ. ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್, ಪಿಎಸ್‌ಐಗಳಾಗ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಪಕ್ಕದ ಮನೆಯ ವಕೀಲರೊಬ್ಬರ ಸಮ್ಮುಖ ತಪಾಸಣೆ ನಡೆಸಿ ಪ್ರಥಮ ಮಾಹಿತಿ ಪಡೆದಿದ್ದು, ಘಟನೆ ಬಗ್ಗೆ ತನಿಖೆ ನಡೆಸಿದ್ದಾರೆ. ಈ ವೇಳೆ ಕಳ್ಳರ ಗುರುತು ಪತ್ತೆ ಹಚ್ಚಲು ವಿಜಯಪುರದಿಂದ ಶ್ವಾನದಳವನ್ನು ಕರೆತಂದು ಶೋಧ ನಡೆಸಿದ್ದಾರೆ. ಈ ವೇಳೆ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ವಕೀಲರಾದ ಚೇತನ ಶಿವಶಿಂಪಿ, ಬಿ.ಎ.ಪಾಟೀಲ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮುಂತಾದವರು ಸ್ಥಳದ್ಲಿ ಹಾಜರಿದ್ದರು.