ಹುಬ್ಬಳ್ಳಿ:
ಅವರು ಹಳೇಹುಬ್ಬಳ್ಳಿಯ ಆಶಾರ ಓಣಿಯ ಭವಾನಿ ಶಂಕರ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ, ವಿವಾದಿತ ರಸ್ತೆ ಕಾಮಗಾರಿ ಪರಿಶೀಲಿಸಿದ ಬಳಿಕ ರಾಜ್ಯ ಪುರಾತತ್ವ ಇಲಾಖೆಯ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದರು.
ಆಸಾರ ಓಣಿಯಲ್ಲಿರುವ ಪ್ರಾಚೀನ ಶ್ರೀಭವಾನಿಶಂಕರ ಮತ್ತು ನಾರಾಯಣ ದೇವಸ್ಥಾನದ ಇತಿಹಾಸ ಹಾಗೂ ಅಲ್ಲಿರುವ ಪುಷ್ಕರಣಿಯ ಕುರಿತು ದಾಖಲೆಗಳಲ್ಲಿ ಉಲ್ಲೇಖವಿದೆ. ದೇವಸ್ಥಾನದ ಗರ್ಭಗೃಹದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿವಲಿಂಗವಿದೆ. ಪಶ್ಚಿಮ ದಿಕ್ಕಿನಲ್ಲಿ ಪಾಣಿಪೀಠದ ಮೇಲೆ ನಾರಾಯಣ ದೇವರು ನೆಲೆಸಿದ್ದಾರೆ. ದೇವಸ್ಥಾನದ ಮುಖ್ಯದ್ವಾರದಲ್ಲಿ ವಿಜಯನಗರ ಸಾಮ್ರಾಜ್ಯದ ನಾಗರಖಾನೆ ಇದ್ದು, ದೇವಸ್ಥಾನದ ಮುಂಭಾಗದಲ್ಲಿ ಆಯಕಟ್ಟಿನ ಕಲ್ಲುಗಳಿಂದ ನಿರ್ಮಿಸಲಾದ ಪುಷ್ಕರಣಿ ಇದೆ ಎಂದು ಪುರಾತತ್ವ ಇಲಾಖೆಯ ದಾಖಲೆಗಳಲ್ಲೇ ಉಲ್ಲೇಖಿಸಲಾಗಿದೆ ಎಂದರು.ಪುಷ್ಕರಣಿ ಇದೆ ಎನ್ನಲಾದ ಸ್ಥಳವನ್ನು ಪರಿಶೀಲಿಸಿ ವರದಿ ನೀಡುವಂತೆ ಪಾಲಿಕೆ ಪುರಾತತ್ವ ಇಲಾಖೆಗೆ ಮನವಿ ಮಾಡಿತ್ತು. ಅದರಂತೆ 2023ರಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಆಸಾರ ಓಣಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಮೇಲ್ನೋಟಕ್ಕೆ ಪುಷ್ಕರಣಿ ಇದ್ದ ಬಗ್ಗೆ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ವರದಿ ನೀಡಿದ್ದರು. ಈ ವೇಳೆ ಪುಷ್ಕರಣಿಗೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳನ್ನು ಪಾಲಿಕೆ ಅಧಿಕಾರಿಗಳು ಕೇಳಿರಲಿಲ್ಲ. ವಿವಾದ ಉಂಟಾದ ಹಿನ್ನೆಲೆಯಲ್ಲಿ ನಾನೇ ಪುರಾತತ್ವ ಇಲಾಖೆಯಿಂದ ದಾಖಲೆಗಳನ್ನು ಪಡೆದುಕೊಂಡಿದ್ದೇನೆ. ಇದೀಗ ವಾಸ್ತವಾಂಶ ಹೊರಬಿದ್ದಿದೆ ಎಂದರು.
ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಇದೇ ಸ್ಥಳದಲ್ಲಿ ಅಂದಾಜು ₹21 ಕೋಟಿ ವೆಚ್ಚದಲ್ಲಿ ಎಂಟು ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರೂ ಪುರಾತತ್ವ ಇಲಾಖೆಯ ಕಾನೂನುಗಳನ್ನು ಎಂದಿಗೂ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮುಖಂಡರಾದ ಸಂಕಲ್ಪ ಶೆಟ್ಟರ್, ನಾಗೇಶ ಕಲಬುರ್ಗಿ, ಜಯತೀರ್ಥ ಕಟ್ಟಿ, ಸುಧಾಕರ ಶೆಟ್ಟಿ, ವೆಂಕಟೇಶ ಮೇಸ್ತ್ರಿ, ಅನೂಪ ಬಿಜವಾಡ ಸೇರಿದಂತೆ ಹಲವರಿದ್ದರು.