ವಾಸ್ತವತೆಗೆ ಕಲಾತ್ಮಕತೆಯ ಸ್ಪರ್ಶ ನೀಡವ ಪ್ರಯತ್ನವೇ ಸಾಕ್ಷ್ಯಚಿತ್ರ: ವಿ.ಎನ್.ರಾಮಚಂದ್ರ

KannadaprabhaNewsNetwork |  
Published : May 05, 2024, 02:01 AM IST
ರಾಮಚಂದ್ರ4 | Kannada Prabha

ಸಾರಾಂಶ

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಎನ್. ರಾಮಚಂದ್ರ ಅವರ ‘ಅನ್ ಬಿಯರೇಬಲ್ ಬಿಯಿಂಗ್ ಆಫ್ ಲೈಟ್ ನೆಸ್’ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಸಾಕ್ಷ್ಯಚಿತ್ರಗಳು ವಾಸ್ತವವನ್ನು ಅದು ಇದ್ದ ಹಾಗೆ ಹಿಡಿಯಲು ಯತ್ನಿಸುತ್ತವೆ. ಅಂದರೆ ವಾಸ್ತವತೆಗೆ ಕಲಾತ್ಮಕತೆಯ ಸ್ಪರ್ಶ ನೀಡುವ ಪ್ರಯತ್ನ ಮಾಡುತ್ತವೆ ಎಂದು ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಎನ್. ರಾಮಚಂದ್ರ ಹೇಳಿದರು.

ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ತಮ್ಮ ‘ಅನ್ ಬಿಯರೇಬಲ್ ಬಿಯಿಂಗ್ ಆಫ್ ಲೈಟ್ ನೆಸ್’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಸಾಕ್ಷ್ಯಚಿತ್ರಗಳು ಹಸಿ ವಾಸ್ತವವನ್ನು ಸೆರೆ ಹಿಡಿಯುತ್ತಲೇ, ಒಂದು ವಾಸ್ತವವಾದಿ ಕಲಾತ್ಮಕತೆಯನ್ನು ಅನುಸರಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಈ ಕಲಾತ್ಮಕತೆಗಿಂತಲೂ ಅವುಗಳ ವಿಷಯ ಹೆಚ್ಚಿನ ಪ್ರಾಧಾನ್ಯ ಪಡೆಯುತ್ತವೆ ಎಂದರು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಮ್ಮ ಈ ಸಾಕ್ಷ್ಯಚಿತ್ರವು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೆಮುಲಾ ಆತ್ಮಹತ್ಯೆಯ ಸುತ್ತಮುತ್ತಲಿನ ಘಟನೆಗಳನ್ನು ಒಳಗೊಂಡಿದೆ. ಆ ಸಂದರ್ಭ ಅಪಾರ ವಿಷಾದವನ್ನು, ಅಲ್ಲಿ ನಡೆದ ಘಟನೆಗಳು, ಪತ್ರಿಕಾ ವರದಿ ಹಾಗೂ ವಿದ್ಯಾರ್ಥಿಯ ಕೊನೆಯ ಪತ್ರ ಇವುಗಳನ್ನು ಆಧರಿಸಿ ಸೆರೆಹಿಡಿಯಲು ಯತ್ನಿಸಿದೆ ಎಂದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಪ್ರೊ.ನೇಮಿರಾಜ್ ಶೆಟ್ಟಿ, ಡಾ. ಜನಾರ್ದನ್ ಹಾವಂಜೆ, ಡಾ. ಭ್ರಮರಿ ಶಿವಪ್ರಕಾಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

* ರಾಮಚಂದ್ರ ಉಡುಪಿಯವರು

ಮೂಲತಃ ಉಡುಪಿಯವರಾದ ರಾಮಚಂದ್ರ, ಪ್ರಸಿದ್ಧ ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಚಿತ್ರ ನಿರ್ದೇಶನವನ್ನು ಅಭ್ಯಾಸ ಮಾಡಿ ನಂತರ ಮುಂಬೈಯಲ್ಲಿ ನೆಲೆಸಿದರು. ‘ಹಾರ್ಟ್ ಟ್ರಬಲ್ಸ್ ಆಫ್ ರಾಮಚಂದ್ ಯಾವತ್ಮಲ್ ತಿರಿಚುಯಿನಪಳ್ಳಿ ಅಜಮಘರ್’, ‘ಸುದ್ಧ’, ‘ಪುಟಾಣಿ ಪಾರ್ಟಿ’, ‘ರೈಸ್ ಆ್ಯಂಡ್ ಸಾಂಬಾರ್’ ಇವು ಇವರ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮನ್ನಣೆ ಪಡೆದ ಮುಖ್ಯ ಚಲನಚಿತ್ರಗಳಾಗಿವೆ. ಅವರು ಈಗ ಗುಜರಾತಿನ ಕರ್ಣಾವತಿ ವಿಶ್ವವಿದ್ಯಾಲಯದ ಫಿಲ್ಮ್ ಸ್ಕೂಲಿನ ಮುಖ್ಯಸ್ಥರಾಗಿದ್ದಾರೆ.

ರೋಹಿತ್ ವೆಮುಲಾ ಆತ್ಮಹತ್ಯೆಯ ಸಂದರ್ಭ ರಾಮಚಂದ್ರ ಅವರು ಅಲ್ಲಿನ ಮಾಧ್ಯಮ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಡಲು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿದ್ದರು. ಹೀಗಾಗಿ ಈ ಸಾಕ್ಷ್ಯಾಚಿತ್ರ ತುಂಬಾ ಮಹತ್ವ ಪಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ