ಸ್ವಾಧೀನ ಮಾಡಿಕೊಳ್ಳಲು ಉದ್ದೇಶಿಸಿರುವ ದೊಡ್ಡಬೆಳವಂಗಲ, ರಾಂಪುರ, ಸೊಣ್ಣೆನಹಳ್ಳಿ, ನಾರನಹಳ್ಳಿ ಹಾಗೂ ಚಿಕ್ಕಬೆಳವಂಗಲ ಗ್ರಾಮಗಳ ಭೂಮಿಯನ್ನು ಕೈಬಿಡದೇ ಇದ್ದರೆ ನ್ಯಾಯಾಲಯದ ಮೂಲಕ ರೈತರಿಗೆ ನ್ಯಾಯ ದೊರಕಿಸಿಕೊಡಲಾಗುವುದು. ಹಾಗೆಯೇ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧವೂ ಕಾನೂನು ಹೋರಾಟ ನಡೆಸಲಾಗುವುದು.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಸುತ್ತಮುತ್ತ ನಡೆಯುತ್ತಿರುವ 2,100 ಎಕರೆ ಫಲವತ್ತಾದ ಕೃಷಿ ಭೂಸ್ವಾಧೀನ ಖಂಡಿಸಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಚಿಕ್ಕಬೆಳವಂಗಲದಿಂದ ತಾಲೂಕು ಕಚೇರಿವರೆಗೆ ನೂರಾರು ಟ್ರ್ಯಾಕ್ಟರ್‌ಗಳ ಮೂಲಕ ರ್‍ಯಾಲಿ ನಡೆಸಿದ ರೈತರು, ತಾಲೂಕು ಕಚೇರಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬಳಿಕ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಭೂಸ್ವಾಧೀನ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಹೈಕೋರ್ಟ್ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ, ಸ್ಥಳೀಯ ಕಂದಾಯ - ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಫಲವತ್ತಾದ ಕೃಷಿ ಭೂಮಿ ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನವಾಗುವಂತೆ ಮಾಡಿದ್ದಾರೆ. ಈಗ ಸ್ವಾಧೀನಕ್ಕೆ ಒಳಪಡುತ್ತಿರುವ ಕೃಷಿ ಭೂಮಿಯಲ್ಲಿ ನಮ್ಮ ಪೂರ್ವಿಕರ ಕಾಲದಿಂದಲೂ ಅಡಿಕೆ, ತೆಂಗು, ಬಾಳೆ ಸೇರಿದಂತೆ ಹತ್ತಾರು ರೀತಿಯ ಬೆಳೆಗಳನ್ನು ಬೆಳೆಯುತ್ತ ಬದುಕು ಕಟ್ಟಿಕೊಂಡಿರುವ ಸಾವಿರಾರು ರೈತ ಕುಟುಂಬಗಳಿವೆ. ಇಂತಹ ಫಲವತ್ತಾದ ಕೃಷಿ ಭೂಮಿಯನ್ನು ಖಾಲಿ ಭೂಮಿ ಎಂದು ಸರ್ಕಾರಕ್ಕೆ ವರದಿ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾನೂನು ಹೋರಾಟದ ಎಚ್ಚರಿಕೆ:
ಈಗ ಸ್ವಾಧೀನ ಮಾಡಿಕೊಳ್ಳಲು ಉದ್ದೇಶಿಸಿರುವ ದೊಡ್ಡಬೆಳವಂಗಲ, ರಾಂಪುರ, ಸೊಣ್ಣೆನಹಳ್ಳಿ, ನಾರನಹಳ್ಳಿ ಹಾಗೂ ಚಿಕ್ಕಬೆಳವಂಗಲ ಗ್ರಾಮಗಳ ಭೂಮಿಯನ್ನು ಕೈಬಿಡದೇ ಇದ್ದರೆ ನ್ಯಾಯಾಲಯದ ಮೂಲಕ ರೈತರಿಗೆ ನ್ಯಾಯ ದೊರಕಿಸಿಕೊಡಲಾಗುವುದು. ಹಾಗೆಯೇ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧವೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಅಧಿಕಾರಿಗಳ ವಿರುದ್ಧ ಕೇಸ್:
ನಮ್ಮ ಪ್ರತಿಭಟನೆಗೆ ಮನ್ನಣೆ ನೀಡಿ ಸರ್ಕಾರ ಭೂಸ್ವಾಧೀನವನ್ನು ಕೈಬಿಡದೇ ಇದ್ದರೆ ಸಮೃದ್ಧವಾಗಿ ಬೆಳೆ ಬೆಳೆಯುತ್ತಿರುವ ಭೂಮಿಯನ್ನು ಖಾಲಿ ಭೂಮಿ ಎಂದು ವರದಿ ನೀಡಿರುವ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾಖಲಿಸಲಾಗುವುದು. ನಮ್ಮೂರಿನ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ರದ್ದತಿಯ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಂವಿಧಾನಬದ್ದ ಹಕ್ಕಿಗಾಗಿ ರೈತರ ಆಗ್ರಹ:
ಮುಖಂಡರಾದ ಎನ್. ಪ್ರಭಾ, ಡಿ.ಸಿ. ಶಶಿಧರ್ ಹಾಗೂ ಸಿ.ಎಚ್. ರಾಮಕೃಷ್ಣಯ್ಯ ಮಾತನಾಡಿ, ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ಸೊಣ್ಣೆನಹಳ್ಳಿ, ನಾರನಹಳ್ಳಿ, ರಾಂಪುರ ಗ್ರಾಮಗಳ ರೈತರಿಗೆ ಸೇರಿದ ಸುಮಾರು 2,100 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಳ್ಳಲು ವಿಶೇಷ ಜಿಲ್ಲಾಧಿಕಾರಿಗಳು ಕೆಐಎಡಿಬಿಯ 398ನೇ ಬೋರ್ಡ್ ಸಭೆಯಲ್ಲಿ ಮಂಡಿಸಿ, ಭೂಸ್ವಾಧೀನಕ್ಕೆ ಶಿಫಾರಸು ಮಾಡಿದ್ದಾರೆ. ಭಾರತದ ಸಂವಿಧಾನವು ಎಲ್ಲರಿಗೂ ಜೀವಿಸುವ ಹಕ್ಕನ್ನು ನೀಡಿದೆ. ಅದರಂತೆ ಈಗಾಗಲೇ ಸಂಕಷ್ಟದಲ್ಲಿರುವ ರೈತರನ್ನು ಬದುಕಲು ಬಿಡಬೇಕು ಮತ್ತು ಅವರು ಗುಳೆ ಹೋಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಜೆಡಿಎಸ್ ಮುಖಂಡ ಹರೀಶ್ ಗೌಡ, ಸಿಪಿಎಂ ತಾಲೂಕು ಕಾರ್ಯದರ್ಶಿ ರುದ್ರಾರಾಧ್ಯ. ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಸ್ಥಳೀಯ ಮುಖಂಡರಾದ ಪ್ರಭಾ ಬೆಳವಂಗಲ, ಸಿ.ಎಚ್. ರಾಮಕೃಷ್ಣಯ್ಯ, ಡಿ.ಸಿ. ಶಶಿಧರ್, ಸುನಿಲ್ ಕುಮಾರ್, ಮನು ಸೇರಿದಂತೆ ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.