ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್ ನಂತರ ಸಾರ್ವಜನಿಕರಿಗೆ ಸರ್ಕಾರಿ ಸೇವೆ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಏಪ್ರಿಲ್ 1ರಿಂದ ಜಾರಿಗೆ ಬಂದಿದ್ದು, ಅದರಂತೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ದರವೂ ಹೆಚ್ಚಳವಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್ ನಂತರ ಸಾರ್ವಜನಿಕರಿಗೆ ಸರ್ಕಾರಿ ಸೇವೆ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಏಪ್ರಿಲ್ 1ರಿಂದ ಜಾರಿಗೆ ಬಂದಿದ್ದು, ಅದರಂತೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ದರವೂ ಹೆಚ್ಚಳವಾಗಿದೆ.ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ಅತಿ ಹೆಚ್ಚು ಟೋಲ್ ಎಂದು ಹೇಳಲಾಗಿತ್ತು. ಅದರಂತೆ ಹೆದ್ದಾರಿಯ ಟೋಲ್ ಮತ್ತಷ್ಟು ದುಬಾರಿಯಾಗಿದೆ. ಹೊಸ ದರ ಇಂದಿನಿಂದ ಜಾರಿಯಾಗಿದೆ.
ಕನಿಷ್ಠ 5 ರಿಂದ ನಿಂದ 25 ರು.ಗಳವರೆಗೆ ನೂತನ ದರ ಏರಿಕೆಯಾಗಿದೆ. ಮಂಡ್ಯದ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾ ಮತ್ತು ರಾಮನಗರದ ಕಣಮಿಣಿಕೆಯಲ್ಲಿನ ಮತ್ತೊಂದು ಟೋಲ್ ಪ್ಲಾಜ್‌ಗಳಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸಲಾಗುತ್ತಿದೆ. ಈ ಎರಡೂ ಟೋಲ್‌ಗಳಲ್ಲಿ ಒಂದೇ ಮಾದರಿ ದರ ಏರಿಕೆಯಾಗಿದೆ.ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಸಂಚಾರ ಮಾಡುವವರಿಗೆ 10 ರು. ಟೋಲ್ ದರ ಏರಿಕೆಯಾಗಿದೆ. 118 ಕಿ.ಮೀ. ಇರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಎರಡು ಟೋಲ್‌ಗಳಿಂದ ಈ ಮೊದಲು 345 ರು.ಗಳ ಟೋಲ್ ದರ ಇತ್ತು. ಇದೀಗ 355 ರು. ಆಗಿದೆ. ಇದು ಇಂದಿನಿಂದಲೇ ಅನ್ವಯವಾಗಿದೆ.
ಕಾರು, ವ್ಯಾನ್, ಜೀಪ್‌ಗಳಿಗೆ ಹಿಂದೆ 170 ರು. ಇತ್ತು. ಈಗ 175 ರು.ನೊಂದಿಗೆ 5 ರು. ಏರಿಕೆಯಾಗಿದೆ. ಲಘು ವಾಹನ, ಮಿನಿ ಬಸ್ ಹಿಂದೆ 275 ರು. ಇತ್ತು. ಈಗ 280 ರು .ಗಳಿಗೆ ಅಂದರೆ 5 ರು. ಏರಿಕೆಯಾಗಿದೆ. ಟ್ರಕ್, ಬಸ್, 2 ಆಕ್ಸೆಲ್ ವಾಹನಗಳಿಗೆ ಈ ಹಿಂದೆ 270 ರು.ಇತ್ತು. ಈಗ 585 ರು ಅಂದರೆ 15 ರು ಏರಿಕೆ ಮಾಡಲಾಗಿದೆ.3 ಆಕ್ಸೆಲ್ ವಾಣಿಜ್ಯ ವಾಹನಗಳಿಗೆ ಈ ಹಿಂದೆ 625 ರು. ಇದ್ದು, ಇಂದಿನಿಂದ 640 ರು .ಗಳೊಂದಿಗೆ 15 ರು. ಏರಿಕೆ ಮಾಡಲಾಗಿದೆ.
ಬಾರಿ ಕಟ್ಟಡ ನಿರ್ಮಾಣ ವಾಹನ, 4, 6 ಆಕ್ಸೆಲ್ ವಾಹನಗಳಿಗೆ ಈ ಹಿಂದೆ 900 ರು. ದರ, ಈಗ 920 ರು. ಅಂದರೆ 20 ರು. ಏರಿಕೆಯಾಗಿದ್ದು, 7 ಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳಿಗೆ ಹಿಂದೆ 1095 ರು.ಗಳಿದ್ದ ದರ ಇದೀಗ 1120 ರು. ಗಳೊಂದಿಗೆ 25 ರು. ಗಳ ಏರಿಕೆ ಕಂಡಿದೆ.ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜ್‌ಗಳಲ್ಲಿನ ದರ ಏರಿಕೆಯಿಂದಾಗಿ ವಾಹನ ಸವಾರರು, ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಹೊರೆ ಬಿದ್ದಂತಾಗಿದೆ. ವಾರ್ಷಿಕ ಪಾಸ್‌ನಲ್ಲೂ ಏರಿಕೆಯಾಗಿದ್ದು, ಲಘು ವಾಹನಗಳಿಗೆ 3 ಸಾವಿರ ರು ಇದ್ದ ದರ ಈಗ 3075 ರು.ಗಳಿಗೆ ಏರಿಕೆಯಾಗಿದೆ. ಮತ್ತೆ ಸರ್ಕಾರ ಟೋಲ್ ದರ ಹೆಚ್ಚಳ ಮಾಡಿರುವುದು ವಾಹನ ಸವಾರರಿಗೆ ಬರೆ ಎಳೆದಂತಾಗಿದೆ. ಸರ್ಕಾರಿ ಸಾರಿಗೆ ಸಂಸ್ಥೆ ವಾಹನಗಳಲ್ಲೂ ಪ್ರಯಾಣಿಕರ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಇದು ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗಿದೆ.