ವೈರಮುಡಿ ಜಾತ್ರಾ ಮಹೋತ್ಸವದ ತೆಪ್ಪೋತ್ಸವ ಭಾರತದ ಶ್ರೀವೈಷ್ಣವ ದೇವಾಲಯಗಳಲ್ಲೇ ಅತ್ಯಾಕರ್ಷಕ ಆಚರಣೆ ಎಂಬ ಖ್ಯಾತಿ ಪಡೆದಿದೆ. ಯೋಗನರಸಿಂಹಸ್ವಾಮಿ ಬೆಟ್ಟದ ತಳಭಾಗದ ಕಲ್ಯಾಣಿ, ಸಾಲುಮಂಟಪಗಳು ಭುವನೇಶ್ವರಿ ಮಂಟಪಗಳಿಗೆ ವಿಶೇಷ ದೀಪಾಲಂಕಾರ ಮಾಡಿದ್ದು, ಚೆಲುವನ ತೆಪ್ಪೋತ್ಸವದ ವೈಭವದ ಕಳೆ ಹೆಚ್ಚಿಸಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆ ಕಲ್ಯಾಣಿಯಲ್ಲಿ ಝಗಮಗಿಸುವ ದೀಪಾಲಂಕಾರದ ನಡುವೆ ಶ್ರೀಚೆಲುವನಾರಾಯಣಸ್ವಾಮಿ ವೈರಮುಡಿ ತೆಪ್ಪೋತ್ಸವ ಬುಧವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು.ವೈರಮುಡಿ ಜಾತ್ರಾ ಮಹೋತ್ಸವದ ತೆಪ್ಪೋತ್ಸವ ಭಾರತದ ಶ್ರೀವೈಷ್ಣವ ದೇವಾಲಯಗಳಲ್ಲೇ ಅತ್ಯಾಕರ್ಷಕ ಆಚರಣೆ ಎಂಬ ಖ್ಯಾತಿ ಪಡೆದಿದೆ. ಯೋಗನರಸಿಂಹಸ್ವಾಮಿ ಬೆಟ್ಟದ ತಳಭಾಗದ ಕಲ್ಯಾಣಿ, ಸಾಲುಮಂಟಪಗಳು ಭುವನೇಶ್ವರಿ ಮಂಟಪಗಳಿಗೆ ವಿಶೇಷ ದೀಪಾಲಂಕಾರ ಮಾಡಿದ್ದು, ಚೆಲುವನ ತೆಪ್ಪೋತ್ಸವದ ವೈಭವದ ಕಳೆ ಹೆಚ್ಚಿಸಿತು.
ವೈರಮುಡಿ ಬ್ರಹ್ಮೋತ್ಸವದ 8ನೇ ತಿರುನಾಳ್ ಅಂಗವಾಗಿ ವಜ್ರಖಚಿತ ರಾಜಮುಡಿ ಕಿರೀಟಧಾರಣೆಯೊಂದಿಗೆ ಪಂಚ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನೆರವೇರಿತು. ಕಲ್ಯಾಣಿ ನಾಲ್ಕೂ ಕಡೆಯ ಸೋಪಾನಗಳ ಮೇಲೆ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಕಿಕ್ಕಿರಿದು ತುಂಬಿದ್ದರು.ಕಲ್ಯಾಣಿ ಸಾಲು ಮಂಟಪಗಳು, ಬಳೆಮಂಟಪಗಳು, ಭುವನೇಶ್ವರಿ ಮಂಟಪ, ಧಾರಾಮಂಟಪ ಸೇರಿದಂತೆ ಇಡೀ ಕಲ್ಯಾಣಿ ಸಮುಚ್ಚಯಕ್ಕೆ ಅತ್ಯಾಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಾತ್ರಿ 7 ಗಂಟೆಗೆ ಕಲ್ಯಾಣಿಯಲ್ಲಿ ಮಹೂರ್ತ ಪಠಣೆಯ ನಂತರ ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ತೆಪ್ಪಮಂಟಪದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ವೈಭವದ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ತೆಪ್ಪೋತ್ಸವಕ್ಕೂ ಮುನ್ನ ಮತ್ತು ನಂತರ ವಿಶೇಷ ನಾದಸ್ವರವಾದನದೊಂದಿಗೆ ಚೆಲುವನಾರಾಯಣಸ್ವಾಮಿಗೆ ವೈಭವದ ಉತ್ಸವ ನೆರವೇರಿಸಲಾಯಿತು.
ತೆಪ್ಪೋತ್ಸವದ ಆರಂಭದ ವೇಳೆ ಸ್ಕೈಶಾಟ್ಸ್ ಸಿಡಿಸಿದಾಗ ಭಕ್ತರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು. ಎರಡು ವರ್ಷದ ನಂತರ ಮಾಡಿದ ಲೇಸರ್ ಷೋ ಸಹ ಗಮನ ಸೆಳೆಯಿತು. ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಆಸಕ್ತಿಯ ಪರಿಣಾಮ ವಿಶೇಷವಾಗಿ ನಡೆದ ವೈರಮುಡಿ ತೆಪ್ಪೋತ್ಸವದ ಮೂರು ಸುತ್ತಿನ ವೇಳೆ ಮ್ಯಾಂಡಲಿನ್ ಮಾಂತ್ರಿಕ ಯು.ಶ್ರೀನಿವಾಸ್ ಶಿಷ್ಯ ವೆಂಕಟೇಶ್‌ರಿಂದ ಮ್ಯಾಂಡಲಿನ್ ವಾದನ, ಹಿರಿಯ ಐ.ಎ.ಎಸ್ ಅಧಿಕಾರಿ ಯಶವಂತರ ಸಹೋದರನ ಪುತ್ರಿ ಭೂಮಿಕಾಮಂಜಪ್ಪ ತಂಡದಿಂದ ಭರತನಾಟ್ಯ ಪ್ರದರ್ಶನ, ಎಸ್.ಎನ್.ಐ ಸಾಂಸ್ಕೃತಿಕ ವೇದಿಕೆಯ ನಾದೋಪಾಸನ ಸೇವೆಯಡಿ ಆಕಾಶವಾಣಿ ಎಗ್ರೇಡ್ ಕಲಾವಿದ ವಿದ್ವಾನ್ ಶ್ರೀಧರ ತಂಡದ ವಿಶೇಷ ನಾದಸ್ವರ ವಾದನ ತೆಪ್ಪೋತ್ಸವದ ವೈಭವದ ಕ್ಷಣಗಳಿಗೆ ನಾದ ಮಾಧುರ್ಯ ತುಂಬಿತು.ಇಂದು ತೀರ್ಥಸ್ನಾನ ಅವಭೃತ ಪಟ್ಟಾಭಿಷೇಕ:
ಚೆಲುವನಾರಾಯಣಸ್ವಾಮಿ ಜಯಂತಿ ದಿನವಾದ ಏ.2ರ ಗುರುವಾರ ವೈರಮುಡಿ ಜಾತ್ರಾಮಹೋತ್ಸವದ 9ನೇ ತಿರುನಾಳ್ ಅಂಗವಾಗಿ ಕಲ್ಯಾಣಿಯಲ್ಲಿ ಮಧ್ಯಾಹ್ನ 11 ಗಂಟೆ ನಂತರ ತೀರ್ಥಸ್ನಾನ ನಡೆಯಲಿದೆ. ನಂತರ ಸಂಜೆ 5 ಗಂಟೆಗೆ ಪರಕಾಲಮಠದಲ್ಲಿ ಪಟ್ಟಾಭಿಷೇಕ ನಡೆಯಲಿದೆ. ಇದರೊಂದಿಗೆ ವಜ್ರಖಚಿತ ರಾಜಮುಡಿ ಕಿರೀಟದ ಅಲಂಕಾರ ಸಮಾಪ್ತಿಯಾಗಲಿದೆ. ರಾತ್ರಿ ಸಮರ ಭೂಪಾಲವಾಹನ, ವೈರಮುಡಿ ಬ್ರಹ್ಮೋತ್ಸವದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಲ್ಕೂ ಸ್ಥಾನಾಚಾರ್ಯರಿಗೆ ಮಾಲೆಮರ್ಯಾದೆ ನೆರವೇರಲಿದೆ.