ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮದ ಹೊರ ವಲಯದ ಶ್ಯಾನಬೋಗರ ತೋಟದ ಆವರಣದಲ್ಲಿ ಕುಲಗುರು ಬೋಳಾನಹಳ್ಳಿಯ ಶ್ರೀನಿಜಗುಣ ಒಡೆಯರ್‌ಅವರ ನೇತೃತ್ವದಲ್ಲಿ ಗ್ರಾಮ ದೇವತೆಗಳಾದ ದೊಡ್ಡಮ್ಮತಾಯಿ, ಸುಡುಗಾಡಮ್ಮ, ಬೆಟ್ಟದಸಿದ್ದಯ್ಯ, ಸಿದ್ದರಾಮೇಶ್ವರ, ಕಟ್ಟೇಸಿದ್ದೇಶ್ವರ ಹಾಗೂ ಕಾಲಭೈರವೇಶ್ವರಸ್ವಾಮಿ ದೇವರುಗಳು ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಗ್ರಾಮಸ್ಥರು, ವಿವಿಧ ಊರುಗಳಿಂದ ಆಗಮಿಸಿದ ದೇವರ ಭಕ್ತರು ಸರತಿ ಸಾಲಿನಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಎಲ್ಲಾ ದೇವರುಗಳನ್ನು ಮೆರವಣೆಯ ಮೂಲಕ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಉತ್ಸವ ನಡೆಸಲಾಯಿತು. ಉತ್ಸವದಲ್ಲಿ ಈರಮಕ್ಕಳಿಂದ ಮೂಡಿಬಂದ ದೇವರ ಕುಣಿತ ಎಲ್ಲರ ಗಮನ ಸೆಳೆಯಿತು.ಇದಕ್ಕೂ ಮುನ್ನ ಜಾತ್ರೆ ಅಂಗವಾಗಿ ಮಂಗಳವಾರ ದೊಡ್ಡಮ್ಮತಾಯಿ ಗುಡಿಗೆ ಪೂಜೆ ಸಲ್ಲಿಸಿ ಮೀಸಲು ನೀರುತಂದು ದೇವರಿಗೆ ಪ್ರಸಾದ ವಿನಿಯೋಗ, ಬುಧವಾರ ಸಂಜೆ ಸುಡುಗಾಡಮ್ಮ ತಾಯಿಗೆ ಪೂಜೆಸಲ್ಲಿಕೆ, ತಾಯಿ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ, ಗುರುವಾರ ಸಿದ್ದೇಶ್ವರಸ್ವಾಮಿ ಹಲಿಗೇ ಕುಣಿತ ನಡೆಸಲಾಯಿತು.
ಅನ್ನಸಂತರ್ಪಣೆ:
ಶ್ರೀ ದೊಡ್ಡಮ್ಮತಾಯಿ ಜಾತ್ರಾ ಮಹೋತ್ಸವಕ್ಕೆ ಬನ್ನಂಗಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಸುಮಾರು 8 ಸಾವಿರಕ್ಕೂ ಅಧಿಕ ಮಂದಿಗೆ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಭಕ್ತಿಭಾವ ಪ್ರದರ್ಶಿಸಿದರು.ನಾಟಕ: ಜಾತ್ರಾ ಮಹೋತ್ಸವದ ಅಂಗವಾಗಿ ಬನ್ನಂಗಾಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ‘ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ’ ಎಂಬ ಕುರುಕ್ಷೇತ್ರ ನಾಟಕ ನಡೆಯಿತು.