ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ
ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಗಾಸ್ ಸಂಸ್ಥೆಯ ಮೊಟ್ಟೆಯಲ್ಲಿ ಸೇವಿಸಬಾರದ ಆ್ಯಂಟಿ ಬಯೋಟಿಕ್ ಇರುವ ಮಾಹಿತಿ ಬಂದಿತ್ತು. ಅದರ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಹೆಚ್ಚಿನ ಜನರು ಸೇವಿಸುತ್ತಾರೆ. ಹೀಗಾಗಿ ಯಾವುದೇ ಗೊಂದಲ ಇರಬಾರದು ಎಂಬ ಕಾರಣಕ್ಕಾಗಿ ಪರೀಕ್ಷೆ ಮಾಡಲಾಗುತ್ತಿದೆ ಎಂದರು.
ಅನುಮಾನ ವ್ಯಕ್ತವಾಗಿರುವ ಎಗಾಸ್ ಸಂಸ್ಥೆಯ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ನಂತರ ಅದರ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಯಾರೂ ಆತಂಕಕ್ಕೊಳಗಾಗಬಾರದು ಎಂದು ತಿಳಿಸಿದರು.ಕಳೆದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ 125 ಮೊಟ್ಟೆಯ ಸ್ಯಾಂಪಲ್ ಪರೀಕ್ಷೆಗೊಳಪಡಿಸಲಾಗಿತ್ತು. ಅದರಲ್ಲಿ 123 ಮೊಟ್ಟೆಗಳ ಗುಣಮಟ್ಟ ಸರಿಯಿದ್ದು, 2 ಸ್ಯಾಂಪಲ್ ಮಾತ್ರ ಸರಿಯಿಲ್ಲ ಎಂದು ವರದಿ ಬಂದಿತ್ತು. ಆದರೂ, ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಹೇಳಿದರು.
ಎಲ್ಲ ಮೊಟ್ಟೆಗಳೂ ಡೇಂಜರ್ ಅಲ್ಲ; ಆರೋಗ್ಯ ತಜ್ಞರ ಅಭಯ:ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಕಂಡುಬಂದಿರುವ ವದಂತಿಯ ನಡುವೆಯೇ ಎಲ್ಲ ಮೊಟ್ಟೆಗಳಲ್ಲಿ ಅಪಾಯಕಾರಿ ಅಂಶಗಳು ಇರುವ ಸಾಧ್ಯತೆಗಳು ಇಲ್ಲ ಎಂದು ಆಹಾರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆಯ ಪೋಷಣೆ ವಿಭಾಗದ ಉಪ ನಿರ್ದೇಶಕಿ ಡಾ. ಇಂದಿರಾ ಕಬಾಡೆ, ಮೊಟ್ಟೆ ಸುರಕ್ಷತೆ ಕುರಿತು ಪರಿಶೀಲಿಸಲು ಇಲಾಖೆಯಿಂದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗುತ್ತದೆ. ಆದರೆ, ಎಲ್ಲ ಕೋಳಿಗಳ ಮೊಟ್ಟೆಯು ಅಸುರಕ್ಷಿತ ಎಂದು ಹೇಳಲಾಗದು. ನೈಸರ್ಗಿಕವಾಗಿ ಬೆಳೆಯುವ ಕೋಳಿಗಳ ಮೊಟ್ಟೆಗಳಲ್ಲಿ ಅಂತಹ ಅಂಶಗಳು ಪತ್ತೆಯಾಗುವುದಿಲ್ಲ. ಮೊಟ್ಟೆಯು ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಪ್ರೋಟಿನ್, ವಿಟಮಿನ್ ಸೇರಿದಂತೆ ಅಗತ್ಯ ಪೌಷ್ಟಿಕಾಂಶ ಇವೆ ಎಂದು ತಿಳಿಸಿದರು.ಆಹಾರ ತಜ್ಞೆ ಡಾ. ಕೀರ್ತಿ ಕಿರಿಸಾವೆ ಮಾತನಾಡಿ, ನಿರ್ದಿಷ್ಟ ಕಂಪನಿಯ ಮೊಟ್ಟೆಯನ್ನು ಪರಿಶೀಲಿಸಿದಾಗ ಅದರಲ್ಲಿ ‘ಎಒಝಡ್ ನೈಟ್ರೋಫುರಾನ್’ ಅಂಶ ಸುರಕ್ಷತೆ ಮಟ್ಟ ಮೀರಿ ಶೇ.0.7ರಷ್ಟು ಇದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ರೀತಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಮನುಷ್ಯನ ಜೀವಕೋಶಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾರ್ಗಸೂಚಿ ಪ್ರಕಾರ ಎಒಝಡ್ ನೈಟ್ರೋಫುರಾನ್ ಶೇ.0.1ರಷ್ಟು ಮಾತ್ರ ಇರಬೇಕು. ಹೀಗಾಗಿ, ಸರ್ಕಾರದ ಸ್ಯಾಂಪಲ್ ವರದಿ ಬಂದರೆ ಸ್ಪಷ್ಟತೆ ಸಿಗುತ್ತದೆ ಎಂದರು.ಮೊಟ್ಟೆಯು ಸುರಕ್ಷಿತ ಮತ್ತು ಪೌಷ್ಟಿಕ ಆಹಾರವಾಗಿದೆ. ಯಾವುದೇ ಕಲಬೆರಕೆ ಇಲ್ಲದ ಮೊಟ್ಟೆಯಿಂದ ಮನುಷ್ಯರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಆಗುವುದಿಲ್ಲ ಎಂದು ಡಾ. ಕೀರ್ತಿ ಹೇಳಿದ್ದಾರೆ.