ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ವಿದ್ಯಾರ್ಥಿಗಳು ನಾವು ಪೊಲೀಸರಾಗಬೇಕು ಎಂದು ಹೇಳದೆ ಪೊಲೀಸ್ ಆಫೀಸರ್ ಆಗಬೇಕು ಎನ್ನುವ ಮೂಲಕ ಉನ್ನತ ವ್ಯಾಸಂಗದಲ್ಲಿ ತೊಡಗಿಸಿಕೊಂಡು ಯಶಸ್ವಿ ಅಧಿಕಾರಿಗಳಾಗುವ ನಿಟ್ಟಿನಲ್ಲಿ ನಿಮ್ಮ ಗುರಿ ನಿರಂತರವಾಗಿ ಇರಲಿ ಎಂದು ಶಾಸಕ ಎ .ಆರ್. ಕೃಷ್ಣಮೂರ್ತಿ ಹೇಳಿದರು.ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನದ ಪ್ರಯುಕ್ತ ಎಂ.ಜಿ.ಎಸ್.ವಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ದಿನಗಳಲ್ಲಿ ಕ್ರೀಡೆಗೂ ಹೆಚ್ಚಿನ ಮಹತ್ವವಿದೆ. ಅದೇ ರೀತಿ ವಿದ್ಯಾರ್ಥಿಗಳು ಸಹ ಕ್ರೀಡೆಗಳಲ್ಲಿ ಉತ್ಸಾಹದಿಂದಲೇ ಪಾಲ್ಗೊಳ್ಳಿ. ಕ್ರೀಡೆ ಜೊತೆ ಓದಿಗೂ ಹೆಚ್ಚಿನ ಆದ್ಯತೆ ನೀಡಿ, ಸಾಧನೆ ಮಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳಾಗುವ ನಿಟ್ಟಿನಲ್ಲಿ ನಿಮ್ಮ ಗುರಿ ಇರಲಿ. ನಾನೊಬ್ಬ ಕ್ರೀಡಾಪ್ರೇಮಿ, ಹಾಗಾಗಿಯೇ ಕ್ಷೇತ್ರದಲ್ಲಿ ಯಾವುದೆ ಕಡೆ ಕ್ರೀಡಾಕೂಟಗಳು ನಡೆದರೂ ಸಹ ನಾನು ಉತ್ಸುಕತೆಯಿಂದ ಪಾಲ್ಗೊಳ್ಳುವೆ, 1978 ರಲ್ಲಿ ನಾನು ಹತ್ತನೇ ತರಗತಿ ವಿದ್ಯಾರ್ಥಿಯಾಗಿ ದಸರಾ ಕ್ರೀಡಾಕೂಟದ ವಿಭಾಗಮಟ್ಟದಲ್ಲಿ (ಶಾರದ ವಿಲಾಸ್ ಹೈಸ್ಕೂಲ್ ವತಿಯಿಂದ ಕ್ರೀಡಾಪಟುವಾಗಿ ಸ್ಪರ್ಧಿಸಿದ್ದೆ, ಖೋಖೋ, ಬಾಸ್ಕೆಟ್ ಬಾಲ್ ಗಳಲ್ಲಿ ನಾನು ಸಾಧನೆಗೈದಿರುವೆ ಓಟದಲ್ಲೂ ಉತ್ಸಾಹದಿಂದ ಭಾಗಿಯಾಗುತ್ತಿದ್ದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ, ಶಾಟ್ ಪುಟ್, ಡಿಸ್ಕಸ್ ಥ್ರೋನಲ್ಲೂ ನಾನು ರಾಜ್ಯಮಟದಲ್ಲಿ 3ನೇ ಸ್ಥಾನ ಗಳಿಸಿದ್ದೆ ಎಂದರು.
ಕೆರೆಯೇ ಕ್ರೀಡಾಂಗಣ: ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಕೆರೆಯನ್ನೇ ಹಲವು ಕಡೆ ಕ್ರೀಡಾಂಗಣವನ್ನಾಗಿ ಮಾಡಿಕೊಳ್ಳಲಾಗಿದೆ ಎಂದ ಅವರು, ಮಹದೇಶ್ವರ ಕಾಲೇಜು ಕ್ರೀಡಾಂಗಣ ಅಭಿವೃದ್ಧಿಗೆ ಹಂತ ಹಂತವಾಗಿ ಶ್ರಮಿಸುವೆ. ಈಗಾಗಲೇ ಅಲ್ಲಿ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಮ್ಯಾರಥಾನ್ ಓಟದಲ್ಲಿ 110 ಕ್ಕೂ ಅಧಿಕ ಯುವಕ, ಯುವತಿಯರ ಪಾಲ್ಗೊಂಡು ಗಮನ ಸೆಳೆದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಕಂದಹಳ್ಳಿ ನಂಜುಂಡಸ್ವಾಮಿ, ಡಿವೈಎಸ್ಪಿ ಧರ್ಮೇಂದ್ರ, ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ, ಶಿಕ್ಷಕ ವಿನ್ಸೆಂಟ್ ಆಶೀರ್ವಾದ್, ಎಂ.ಜಿ.ಎಸ್.ವಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚೇತನ್ ದೊರೈರಾಜು ಇನ್ನಿತರಿದ್ದರು.