ಹಿಂಗ್‌ ನಿರ್ಲಕ್ಷ್ಯ ಮಾಡಿದ್ರ, ದಿನಾ ರೈತರ ಆತ್ಮಹತ್ಯೆ ನಡೆದ್ರೂ ಆಶ್ಚರ್ಯ ಪಡಬ್ಯಾಡ್ರಿ

KannadaprabhaNewsNetwork | Published : Nov 5, 2023 1:16 AM

ಸಾರಾಂಶ

ಮಳಿಯಂತೂ ಸಂಪೂರ್ಣ ಹೋಗಿಬಿಟ್ಟೈತಿ, ಗ್ಯಾರಂಟಿ ಯೋಜನೆ ಜಾರಿ ಮಾಡಿಂದ, ಹೊಲಕ್ ಆಳ ಬರವಲ್ಲವು, ಅಲ್ಪ ಸ್ವಲ್ಪ ನೀರಾವರಿ ಇರುವವ್ರಿಗೂ ಕರೆಂಟ್ ಇಲ್ಲಾ ಹಿಂಗಾದ್ರ ಬದುಕು ಹ್ಯಾಂಗ್ರೀ ಯಪ್ಪಾ... ಸರ್ಕಾರದವರು ಹಿಂಗ್ ನಮ್ಮ ಬಗ್ಗೆ ನಿರ್ಲಕ್ಷ್ಯ ಮಾಡಿದ್ರ ದಿನಾಲೂ ರೈತ ಆತ್ಮಹತ್ಯೆ ನಡೆದ್ರೂ ಆಶ್ಚರ್ಯ ಪಡಬ್ಯಾಡ್ರಿ ಎಂದು ಜಿಲ್ಲೆಯಲ್ಲಿ ಶನಿವಾರ ಬರ ಅಧ್ಯಯನ ನಡೆಸಿದ ಬಿಜೆಪಿ ತಂಡಕ್ಕೆ ರೈತರು ಎಚ್ಚರಿಸಿದರು.

ಬರ ಅಧ್ಯಯನ ಕೈಗೊಂಡ ಶ್ರೀರಾಮುಲು ನೇತೃತ್ವದ ಬಿಜೆಪಿ ತಂಡಕ್ಕೆ ಎಚ್ಚರಿಕೆಗದಗ: ಮಳಿಯಂತೂ ಸಂಪೂರ್ಣ ಹೋಗಿಬಿಟ್ಟೈತಿ, ಗ್ಯಾರಂಟಿ ಯೋಜನೆ ಜಾರಿ ಮಾಡಿಂದ, ಹೊಲಕ್ ಆಳ ಬರವಲ್ಲವು, ಅಲ್ಪ ಸ್ವಲ್ಪ ನೀರಾವರಿ ಇರುವವ್ರಿಗೂ ಕರೆಂಟ್ ಇಲ್ಲಾ ಹಿಂಗಾದ್ರ ಬದುಕು ಹ್ಯಾಂಗ್ರೀ ಯಪ್ಪಾ... ಸರ್ಕಾರದವರು ಹಿಂಗ್ ನಮ್ಮ ಬಗ್ಗೆ ನಿರ್ಲಕ್ಷ್ಯ ಮಾಡಿದ್ರ ದಿನಾಲೂ ರೈತ ಆತ್ಮಹತ್ಯೆ ನಡೆದ್ರೂ ಆಶ್ಚರ್ಯ ಪಡಬ್ಯಾಡ್ರಿ.. ಹೀಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಮಾತುಗಳನ್ನು ಹೇಳಿದ್ದು ಗದಗ ತಾಲೂಕಿನ ನಾಗಾವಿ ಗ್ರಾಮದ ರೈತ ನಾಗಪ್ಪ, ಶನಿವಾರ ಬಿಜೆಪಿ ಹಿರಿಯ ನಾಯಕ ಬಿ.ಶ್ರೀರಾಮುಲು ನೇತೃತ್ವದಲ್ಲಿ ನಡೆಸಿದ ಬರ ಅಧ್ಯಯನದ ವೇಳೆಯಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ನಾಯಕರಿಗೆ ರೈತರು ನೀಡಿದ ಎಚ್ಚರಿಕೆ ಮಾತುಗಳಿವು. ಈ ವಿಷಯವಾಗಿ ನೀವು ಬಿಜೆಪಿ ನಾಯಕರು ಪ್ರಧಾನಿ ಮೋದಿ ಅವರಿಗೆ ಹೇಳಿ, ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಜಾರಿ ಮಾಡಿದ ನಂತರ ನಾವೆಲ್ಲಾ ಸತ್ತೇ ಹೋಗುತ್ತಿದ್ದೇವೆ. ರಾಜ್ಯ ಸರ್ಕಾರಕ್ಕೆ ಕೇವಲ ಬಡವರು ಮಾತ್ರ ಕಾಣುತ್ತಿದ್ದಾರೆ. ಅವರಿಗಷ್ಟೇ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ, ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ನಿರಂತರವಾಗಿ ವಿದ್ಯುತ್ ನೀಡುವುದು ಹಲವಾರು ಬೇಡಿಕೆಗಳನ್ನು ಮಂಡಿಸಿದರು. ರೈತರಿಂದ ಅಹವಾಲು ಸ್ವೀಕರಿಸಿದ ಬಿಜೆಪಿ ನಾಯಕರು ಇದನ್ನು ನಮ್ಮ ರಾಜ್ಯದ ವರಿಷ್ಠ ನಾಯಕರ ಗಮನಕ್ಕೆ ತರುತ್ತೇವೆ, ರಾಜ್ಯದ ಎಲ್ಲಾ ಜಿಲ್ಲೆಗಳ ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಘಟಕಗಳ ಪ್ರಮುಖರು ಹಾಜರಿದ್ದರು.

Share this article