ನಮ್ಮ ಭಾಷೆ, ಬದುಕು, ಅಸ್ಮಿತೆಯೊಂದಿಗೆ ಯಾರೂ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ತುಮಕೂರು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ವಿಷಾದಿಸಿದರು.
ಕನ್ನಡಪ್ರಭವಾರ್ತೆ ತುರುವೇಕೆರೆ
ಇತ್ತೀಚಿನ ದಿನಗಳಲ್ಲಿ ನಾಗರಿಕತೆಯ ವ್ಯಾಮೋಹಕ್ಕೊಳಗಾಗಿ ನಾವು ನಮ್ಮತನವನ್ನು ಬಿಟ್ಟುಕೊಡುತ್ತಿದ್ದೇವೆ. ಅದು ಆಗಬಾರದು. ನಮ್ಮ ಭಾಷೆ, ಬದುಕು, ಅಸ್ಮಿತೆಯೊಂದಿಗೆ ಯಾರೂ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ತುಮಕೂರು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ವಿಷಾದಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಯಾಗಿ ೫೦ ವರ್ಷ ತುಂಬಿದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ‘ ಸುವರ್ಣ ಸಂಭ್ರಮ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗತ ಇತಿಹಾಸದ ಸ್ಮರಣೀಯ ನೆನಪುಗಳು ಭವ್ಯ ಭವಿಷ್ಯವನ್ನು ಕಟ್ಟಿ ಹೊಸ ಇತಿಹಾಸವನ್ನು ನಿರ್ಮಿಸಲು ಸಹಕಾರಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ, ಅಲ್ಲಿನ ಸಾಧನೆ ವ್ಯಕ್ತಿತ್ವ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಡುತ್ತದೆ. ವಿಪರ್ಯಾಸವೆಂದರೆ ಖಾಸಗಿ ವಲಯದ ಕಾಲೇಜುಗಳು ಪ್ರವೃದ್ಧಮಾನಕ್ಕೆ ಬಂದಂತೆಲ್ಲಾ ಅತ್ಯುತ್ತಮ ಶೈಕ್ಷಣಿಕ ಸಂಪನ್ಮೂಲವನ್ನುಳ್ಳ ಸರ್ಕಾರಿ ಕಾಲೇಜುಗಳು ಮೂಲೆಗುಂಪಾಗುತ್ತಿವೆ. ಶ್ರೀಮಂತರ ಮಕ್ಕಳು ನಮ್ಮನ್ನು ಆಳುವಂತಾಗಿ ಸಾಮಾನ್ಯ ಬಡ ಮಕ್ಕಳು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಅಸಹಾಯಕ ಪ್ರೇಕ್ಷಕರಾಗುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ಮಾದರಿಯಾಗಬೇಕು ಎಂದರು. ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ವಿ.ಎನ್.ನಂಜೇಗೌಡರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳ್ಳಿಕಾರ್ ತಳಿ ಹಸು ಸಾಕಣೆಗೆ ಹೆಸರುವಾಸಿಯಾದ ವರ್ತೂರು ಸಂತೋಷ್ ಮಾತನಾಡಿ ಹಳ್ಳಿ ಮಕ್ಕಳಿಗೆ ವೃತ್ತಿ ಶಿಕ್ಷಣ ಕೊಡಿಸಲೆಂದೇ ರೈತರು ಬೆಲೆಬಾಳುವ ಜಮೀನುಗಳನ್ನು ಮಾರುತ್ತಿದ್ದಾರೆ. ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೆ ಬಹುತೇಕರು ಅತ್ತ ವೃತ್ತಿ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಲಾಗದೆ ಇತ್ತ ಕೃಷಿಗೆ ಮರಳಲಾರದೆ ತ್ರಿಶಂಕು ಸ್ಥಿತಿ ತಲುಪಿದ್ದಾರೆ. ಶಿಕ್ಷಣ ವ್ಯಾಪಾರವಾಗಿದೆ. ಕೃಷಿ ಕೆಲಸದ ಬಗೆಗಿರುವ ಕೀಳರಿಮೆ ಹೋಗಬೇಕು. ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳ ಕುರಿತು ಜ್ಞಾನ ಮೂಡಿಸುವ ಕೃಷಿ ಶಿಕ್ಷಣ ಬೇಕು. ತುರುವೇಕೆರೆ ತಾಲ್ಲೂಕು ಹಳ್ಳಿಕಾರ್ ತಳಿ ಅಭಿವೃದ್ಧಿ ಕೇಂದ್ರವಾಗಿದ್ದು ರೈತರು ಮನೆಗೊಂದು ಹಳ್ಳಿಕಾರ್ ಹಸು ಸಾಕಬೇಕು ಎಂದು ಕಿವಿಮಾತು ಹೇಳಿದರು. ಸಮಾರಂಭದಲ್ಲಿ ಡಾ.ಬಾಲಗುರುಮೂರ್ತಿ ಹಾಗೂ ವರ್ತೂರು ಸಂತೋಷ್ ಅವರನ್ನು ಅಭಿನಂದಿಸಲಾಯಿತು. ವಿಭಿನ್ನ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಡಾ.ನಂಜಪ್ಪ, ಡಿ.ಬಿ.ವಿನುತಾ, ತುರುವೇಕೆರೆ ಪ್ರಸಾದ್, ಡಿ.ಬಿ.ಹೊನ್ನೇಶ್‌ಗೌಡ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಟಿ.ಆರ್.ಮಲ್ಲಿಕಾರ್ಜುನ್ ಬಹುಮಾನ ವಿತರಿಸಿದರು. ತಾ.ಪಂ.ಇ.ಓ. ಪಿ.ಎಸ್. ಅನಂತರಾಜು, ಬಿ.ಇ.ಓ ಸೋಮಶೇಖರ್, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಪ್ರಾಂಶುಪಾಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ, ಉಪ ಪ್ರಾಂಶುಪಾಲ ಜಿ.ಬಿ. ವೆಂಕಟೇಶ್, ಟಿ.ಎಸ್. ಬೋರೇಗೌಡ, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿ.ಎನ್.ನಂಜೇಗೌಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಮಲ ವರದಿ ವಾಚಿಸಿದರು. ಸ್ವಾಮಿ ವಂದಿಸಿದರು. ಸೋನಾಕ್ಷಿ, ಅರ್ಬಿಯಾ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶೋಭಾ, ರಕ್ಷಿತಾ, ಮಾನಸ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.